ಹೊಸಪೇಟೆ: ರಾಜ್ಯ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಹೊರಡಿಸಿರುವುದನ್ನು ಖಂಡಿಸಿ ವಿಜಯನಗರ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆ ಎದುರು ಶುಕ್ರವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.
ಬಡವರಿಗೆ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತ್ತಿದ್ದವು. ಈಗ ಸರ್ಕಾರ ಈ ಕೇಂದ್ರಗಳನ್ನು ಮುಚ್ಚುವುದರಿಂದ ದುಬಾರಿ ಹಣ ನೀಡಿ ಔಷಧಿ ಖರೀದಿಸಬೇಕಾಗಿದೆ. ಮೆಡಿಕಲ್ ಮಾಫಿಯಾಕ್ಕೆ ಅವಕಾಶ ನೀಡದೇ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಮುಂದುವರಿಸಬೇಕು. ಇದರಿಂದ ಆಸ್ಪತ್ರೆಗಳಿಗೆ ಬರುವ ಲಕ್ಷಾಂತರ ಜನರಿಗೆ ಅನುಕೂಲ ಆಗಲಿದೆ. ರಾಜ್ಯದಲ್ಲಿ ನಿತ್ಯ 5ರಿಂದ 6 ಲಕ್ಷ ಜನರಿಗೆ ಈ ಔಷಧಿಗಳಿಂದ ಅನುಕೂಲ ಆಗುತ್ತಿತ್ತು. ಗಂಭೀರ ಕಾಯಿಲೆಗಳಿಗೂ ಕೈಗೆಟಕುವ ದರದಲ್ಲಿ ಔಷಧಿ ದೊರೆಯುತ್ತಿತ್ತು. ಹಾಗಾಗಿ ಈ ಕೇಂದ್ರಗಳನ್ನು ಮರಳಿ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷ ರೂಪೇಶ್‌ಕುಮಾರ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ ಜೀರೆ, ಶಂಕರ ಮೇಟಿ, ಕೆ.ಎಸ್. ರಾಘವೇಂದ್ರ, ಕಿಚಿಡಿ ಕೊಟ್ರೇಶ್, ಸಾಲಿ ಸಿದ್ದಯ್ಯ ಸ್ವಾಮಿ, ರೇವಣಸಿದ್ದಪ್ಪ, ವಿಜಯೇಂದ್ರ, ಚಂದ್ರು ದೇವಲಾಪುರ, ಹೊನ್ನೂರಪ್ಪ ಸತ್ಯನಾರಾಯಣ, ಗೌಳಿ ಬಸವರಾಜ, ರಾಜಶೇಖರ, ಉಮಾದೇವಿ, ಅನುರಾಧಾ, ಪೂರ್ಣಿಮಾ, ಶ್ರೀಲತಾ ಮತ್ತಿತರರಿದ್ದರು.