ಕಮಲ್ ಹಾಸನ್ ಹೇಳಿಕೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ

KannadaprabhaNewsNetwork |  
Published : May 31, 2025, 01:22 AM IST
2 | Kannada Prabha

ಸಾರಾಂಶ

ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆಯವರು ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು

ಕನ್ನಡಪ್ರಭ ವಾರ್ತೆ ಮೈಸೂರು

ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆಯವರು ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸ ಕನ್ನಡ ಭಾಷೆಗಿದೆ. ಹಲ್ಮಿಡಿ ಶಾಸನದಿಂದ ಹುಟ್ಟಿಕೊಂಡು ಬಂದಿರುವ ನಮ್ಮ ಭಾಷೆ ಸಂಸ್ಕೃತ ಪದಕ್ಕೆ ಜೋಡಣೆ ಇದೆ. ಪಂಪನಿಂದ ಹಿಡಿದು ಜನ್ನನವರೆಗೂ ಭಾಷೆಯ ಇತಿಹಾಸ ಸಾಗುತ್ತಿದೆ. ಕನ್ನಡಿಗರ ಹೋರಾಟದ ಫಲವಾಗಿ ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವೂ ದೊರೆತಿದೆ. ಇಮ್ಮಡಿ ಪುಲಕೇಶಿ ಕನ್ನಡ ನಾಡಿನಿಂದ ಆಫ್ಘಾನಿಸ್ತಾನದವರೆಗೆ ಆಡಳಿತ ಮಾಡಿದ್ದಾನೆ. ಮಯೂರ, ಚಂದ್ರಗುಪ್ತರ ಕೊಡುಗೆ ನಮ್ಮ ನಾಡಿಗೆ ಅಪಾರವಾದದ್ದು. ಆದರೆ, ನಮ್ಮ ಭಾಷೆಯ ಬಗ್ಗೆ ತಿಳಿಯದ ನಟ ಕಮಲ್ ಹಾಸನ್ ಅಸಂಬದ್ಧ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.ಕಮಲ್ ಹಾಸನ್‌ ವಯಸ್ಸಾದಂತೆ ಬುದ್ಧಿ ಭ್ರಮಣವಾಗುತ್ತಿದೆ. ತಮಿಳುನಾಡಿನ ಇತಿಹಾಸದಲ್ಲಿ ಹೊರ ರಾಜ್ಯದವರೇ ಎಲ್ಲಾ ಕ್ಷೇತ್ರದಲ್ಲೂ ಆಡಳಿತ ಮಾಡಿದ್ದಾರೆ. ಅದು ಆತನಿಗೂ ಅರಿವಿದೆ. ಶಿವರಾಜ್‌ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದರೂ, ಆತನ ಅಭಿಮಾನದಿಂದ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಆ ಕ್ಷಣದಲ್ಲಿ ಅವರಿಗೆ ಏನು ಮಾತನಾಡಬೇಕು ಎಂದು ತಿಳಿಯಲಿಲ್ಲ. ಆದರೂ ಶಿವರಾಜ್ ಕುಮಾರ್ ತಪ್ಪಾಗಿದೆ ಎಂದು ಹೇಳಬೇಕಾಯಿತು. ನಮ್ಮ ಕನ್ನಡದ ರಜನಿಕಾಂತ್ ತಮಿಳಿನಲ್ಲಿ ಸೂಪರ್ ಸ್ಟಾರ್ ಆದರೂ ತಮಿಳು ಭಾಷೆಗೆ ಗೌರವ ಕೊಡುತ್ತಿದ್ದಾರೆ. ಕಮಲ್‌ ಹಾಸನ್‌ ಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಟ, ಅವರು ಮಾಡಿರುವ ಎಲ್ಲಾ ಭಾಷೆಗೆ ಗೌರವ ಕೊಡುತ್ತಿದ್ದಾರೆ. ಆದರೆ, ಕಮಲ್ ಹಾಸನ್ ನಮ್ಮ ಭಾಷೆಗೆ ಅಪಮಾನ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಚಲನಚಿತ್ರ ಮಂಡಳಿ ಕಮಲ್‌ ಹಾಸನ್ ಚಿತ್ರ ಬಿಡುಗಡೆಗೆ ಅವಕಾಶ ಕೊಡಬಾರದು. ಮುಖ್ಯಮಂತ್ರಿಗಳು ಸಹ ಕಟ್ಟುನಿಟ್ಟಾದ ನಿರ್ಧಾರ ತೆಗೆದುಕೊಳ್ಳಬೇಕು. ಆತನ ಚಿತ್ರ ಬಿಡುಗಡೆ ಆಗಬೇಕಾದರೆ ಕರ್ನಾಟಕಕ್ಕೆ ಬಂದು ತನ್ನ ತಪ್ಪನ್ನು ಅರ್ಥ ಮಾಡಿಕೊಂಡು ಕ್ಷಮೆ ಯಾಚಿಸಬೇಕು. ನಮ್ಮಲ್ಲಿರುವ ಸಾಹಿತಿಗಳೊಂದಿಗೆ ಮಾತನಾಡಿ, ನಾಡಿನ ಇತಿಹಾಸ, ಚರಿತ್ರೆ ತಿಳಿದುಕೊಳ್ಳಬೇಕು. ಆತ ಕ್ಷಮೆ ಕೇಳುವವರೆಗೂ ಹೋರಾಟ ನಿಲ್ಲದು ಎಂದು ಅವರು ಎಚ್ಚರಿಸಿದರು.ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ಗೋಪಿ, ಬೋಗಾದಿ ಸಿದ್ದೇಗೌಡ, ಬಾಬು, ಸಿದ್ದಪ್ಪ, ಮಹದೇವಸ್ವಾಮಿ, ಬಾಬು, ಮನೋಹರ್, ಗೋವಿಂದರಾಜು, ಹರೀಶ್, ಸ್ವಾಮಿ, ನಾಗರಾಜು, ಪ್ರೇಮಾ, ರಾಜು, ಮಾದಪ್ಪ, ಶಿವು, ಸುನಿಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ