ವೈಜ್ಞಾನಿಕ ಕೃಷಿಯಿಂದ ಲಾಭ ನಿಶ್ಚಿತ: ಕುಲಪತಿ ಡಾ. ಪಿ.ಎಲ್. ಪಾಟೀಲ

KannadaprabhaNewsNetwork |  
Published : May 31, 2025, 01:22 AM IST
೨೯ಎಸ್.ಆರ್.ಎಸ್೧ಪೊಟೋ೧ (ಕಾರ್ಯಾಗಾರವನ್ನು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಉದ್ಘಾಟಿಸಿದರು.)೨೯ಎಸ್.ಆರ್.ಎಸ್೧ಪೊಟೋ೨ ( ಸಾಧಕರನ್ನು ಸನ್ಮಾನಿಸಲಾಯಿತು.) | Kannada Prabha

ಸಾರಾಂಶ

ರೈತ ಕುಟುಂಬ ಸಂಪನ್ಮೂಲ ಹೆಚ್ಚಿಸಿಕೊಂಡು ಉದ್ಯಮಿಗಳ ಮಟ್ಟದಲ್ಲಿ ಬೆಳೆಯಬೇಕಾದರೆ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಸರಿಯಾಗಿ ಸಂರಕ್ಷಿಸಿದರೆ ಕೃಷಿ ಸಮೃದ್ಧಿಯಾಗಲಿದೆ.

ಶಿರಸಿ: ವೈಜ್ಞಾನಿಕ ಕೃಷಿಯಿಂದ ಲಾಭ ನಿಶ್ಚಿತವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್.ಪಾಟೀಲ ಹೇಳಿದರು.

ಅವರು ಗುರುವಾರ ತಾಲೂಕಿನ ಅಂಡಗಿ ಕ್ಯಾದಗಿಕೊಪ್ಪದ ಅವಧೂತ ಕಲ್ಲೇಶ್ವರ ಸ್ವಾಮೀಜಿ ಗುರುಮಠದ ಸಭಾಭವನದಲ್ಲಿ ರೈತ ಸಂಘ, ಹಸಿರು ಸೇನೆ ಆಶ್ರಯದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಮೂರು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರೈತ ಕುಟುಂಬ ಸಂಪನ್ಮೂಲ ಹೆಚ್ಚಿಸಿಕೊಂಡು ಉದ್ಯಮಿಗಳ ಮಟ್ಟದಲ್ಲಿ ಬೆಳೆಯಬೇಕಾದರೆ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಸರಿಯಾಗಿ ಸಂರಕ್ಷಿಸಿದರೆ ಕೃಷಿ ಸಮೃದ್ಧಿಯಾಗಲಿದೆ. ಕೃಷಿ ಹೊಂಡಗಳ ಮೂಲಕ ನೀರು ಇಂಗಿಸುವ ಕಾರ್ಯ ಅತಿ ಮುಖ್ಯವಾಗಿದೆ. ಅಂತರ್ಜಲ ಮಟ್ಟ ಏರಿಕೆಯಾದರೆ ಬೆಳೆಗಳಿಗೆ ಅನುಕೂಲವಾಗುತ್ತದೆ. ಪೋಷಕಾಂಶಗಳ ಕೊರತೆ ಪತ್ತೆ ಹಚ್ಚಲು ಬೇಸಿಗೆಯಲ್ಲಿ ಎರಡು ವರ್ಷಕ್ಕೆ ಮಣ್ಣು ಪರೀಕ್ಷೆ ಮಾಡಿಸಬೇಕು. ಅವುಗಳನ್ನು ಸಾಂಪ್ರದಾಯಿಕ ಹಾಗೂ ರಾಸಾಯನಿಕ ಮೂಲಕ ಪೂರೈಸಲು ಸಾಧ್ಯ. ಬೆಳೆ ಪದ್ಧತಿಯಲ್ಲಿ ಪರಿವರ್ತನೆ ಅವಶ್ಯವಾಗಿದೆ. ಒಂದೇ ತೆರನಾದ ಬೆಳೆ ಬೆಳೆದರೆ ರೋಗ, ಕೀಟ, ಕ್ರಿಮಿಗಳು ಅಲ್ಲಿಯೇ ಇರುತ್ತವೆ. ಬೆಳೆ ಪರಿವರ್ತನೆ ಮಾಡಿರುವುದರಿಂದ ರೋಗ ಹತೋಟಿ ಸಾಧ್ಯ. ಬೆಳೆಗಳನ್ನು ಸಂಸ್ಕರಣೆ ಮಾಡುವುದು ಅವಶ್ಯವಾಗಿದೆ. ಆದರೆ ರೈತರು ಇತ್ತೀಚಿನ ದಿನಗಳಲ್ಲಿ ನೇರವಾಗಿ ಬೆಳೆ ಮಾರಾಟ ಮಾಡುತ್ತಿದ್ದಾರೆ. ರೈತ ಉತ್ಪಾದಕ ಕಂಪನಿಗಳ ಸಹಾಯ ಪಡೆದು ಬೆಳೆಗಳ ಮೌಲ್ಯವರ್ಧನೆ ಮಾಡುವುದರಿಂದ ಕುಟುಂಬದ ಆದಾಯ ಅಧಿಕವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ಕೃಷಿ ಕಾಯ್ದೆ ರೈತರ ತಲೆ ಮೇಲೆ ಕೂತಿದೆ. ಅದು ಜಾರಿಯಾಗಬಾರದು ಎಂದು ಅನೇಕ ಹೋರಾಟ ಮಾಡಿದ್ದೇವೆ. ಆದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದರು. ಆಗ ಸಿದ್ದರಾಮಯ್ಯ ನಮ್ಮನ್ನು ಕರೆದು ನಮ್ಮನ್ನು ಬೆಂಬಲಿಸಿ ಮುಂದೆ ನಮ್ಮ ಸರ್ಕಾರ ಬಂದು ನಾನು ಮುಖ್ಯಮಂತ್ರಿಯಾದ ಬಳಿಕ ಕಾಯ್ದೆ ರದ್ದಾಗುತ್ತದೆ ಎಂದು ಹೇಳಿದ್ದರಿಂದ ಅವರನ್ನು ಬೆಂಬಲಿಸಿದ್ದೆವು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ೨ ವರ್ಷದ ಸಾಧನಾ ಸಮಾವೇಶ ಆಗಿದೆ. ಆದರೆ ಕೃಷಿ ಕಾಯ್ದೆ ವಾಪಸ್‌ ಪಡೆದಿಲ್ಲ. ಅದಕ್ಕಾಗಿ ದೀರ್ಘವಾಗಿ ಚರ್ಚಿಸಿ, ತೀರ್ಮಾನಕ್ಕೆ ಬರಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಪ್ರಕೃತಿ ತಿದ್ದಲು ಹೊಸ ಹೆಜ್ಜೆ ಇಡಲು ಹೊರಟಿದ್ದಾರೆ. ಅದು ಜಾರಿ ಬೇಕಾ ಎಂಬ ನೀತಿ ನಿಯಮ ರೂಪಿಸಲಾಗಿದೆ. ರೈತರ ಹೊಲಗಳಿಗೆ ಅದು ಬೇಕಾ ಎಂಬುದು ಕುರಿತು ಚರ್ಚಿಸಲಾಗುತ್ತದೆ. ಕರ್ನಾಟಕ ರಾಜ್ಯ ನೂರಾರು ಟಿಎಂಸಿ ನೀರು ಬೇರೆ ರಾಜ್ಯದ ಪಾಲಾಗುತ್ತಿದೆ. ಮೇಕೆದಾಟು, ಮಹದಾಯಿ ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ನೀರಿನ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಬೇಕಿದೆ ಎಂದರು.

ಈ ಸಂದರ್ಭದಲ್ಲಿ ೩೫೦ ಭತ್ತದ ತಳಿ ಸಂರಕ್ಷಕ ರಾಮಕೃಷ್ಣ ಭಟ್ಟ ದೇವತೆಮನೆ, ಸಾಧಕ ಮಹಿಳೆ ಗೌರಿ ನಾಯ್ಕ, ದಂತ ವೈದ್ಯ ಹಾಗೂ ಪ್ರಗತಿಪರ ಕೃಷಿಕ ಡಾ.ಜ್ಞಾನೇಶ, ಯುವರಾಜ ಗೌಡ್ರು, ಮಂಜುನಾಥ ನಾಯ್ಕ ಅಂಡಗಿ, ರಾಮಚಂದ್ರ ಮೇಲಿನಮನೆ ಸೊರಬ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೈತ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಶಿರಸಿ ಕೆ.ವಿ.ಕೆ ಮುಖ್ಯಸ್ಥೆ ರೂಪಾ ಪಾಟೀಲ, ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ರಾಜ್ಯ ಉಪಾಧ್ಯಕ್ಷ ಕಲ್ಮೇಶ ಲಿಗಾಡಿ, ಉಮೇಶ ಪಾಟೀಲ, ರೈತ ಸಂಘದ ಉಕ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಡಾ. ಕ್ರೇಶಿ ಬೆಂಗಳೂರು, ರಾಜ್ಯ ಕಾರ್ಯದರ್ಶಿ ಬಾಬು ಹಸನ್, ಕಾರ್ಮಿಕ ನಾಯಕ ಅರುಣಕುಮಾರ ಮತ್ತಿತರರು ಇದ್ದರು. ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಸ್ವಾಗತಿಸಿದರು. ಗವಿಸಿದ್ದಯ್ಯ ಹಳ್ಳಿಕೇರಿಮಠ ಗದಗ ರೈತ ಗೀತೆ ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!