ಲೇಖಕಿ ಅಕ್ಷತಾ ಹುಂಚದಕಟ್ಟೆ ಅಭಿಪ್ರಾಯ । ‘ಕ್ರಿಯಾಶೀಲತೆ ನೋಟ’ ಸ್ಮರಣ ಸಂಚಿಕೆ ಬಿಡೆಗಡೆ
ಮಹಿಳೆಯರ ಬರಹವೆಂದರೆ ಅದು ಅಡುಗೆ ಮನೆ ಸಾಹಿತ್ಯ ಎಂದು ನಿರ್ಲಕ್ಷ್ಯ ಮಾಡುತ್ತಿದ್ದ ಕಾಲದಲ್ಲಿ ಅದೇ ಮಹಿಳಾ ಸಾಹಿತ್ಯ ವಿಶ್ವ ಮನ್ನಣೆ ತಂದುಕೊಟ್ಟಿದ್ದು ಮಹಿಳಾ ಸಾಹಿತ್ಯಕ್ಕೆ ಸಿಕ್ಕ ಮಾನ್ಯತೆ ಎಂದು ಲೇಖಕಿ ಅಕ್ಷತಾ ಹುಂಚದಕಟ್ಟೆ ಅಭಿಪ್ರಾಯಪಟ್ಟರು.
ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತನ್ನ ಮೂರು ವರ್ಷದ ಕಾರ್ಯಚಟುವಟಿಕೆಗಳ ದಾಖಲೆಗಳಿರುವ ‘ಕ್ರಿಯಾಶೀಲತೆಯ ಒಳನೋಟ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿ ಕುರಿತ ಚರ್ಚೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಕನ್ನಡದ ಲೇಖಕಿಗೆ ಬುಕರ್ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಜಗತ್ತು ಕನ್ನಡ, ಕರ್ನಾಟಕವನ್ನು ವಿಶೇಷ ಆಸಕ್ತಿಯಿಂದ ನೋಡುವ ಕಾಲ ಬಂದಿದೆ. ಹೆಜ್ಜೆ ಮೂಡದ ಹಾದಿ ಆರು ಕಥೆಗಳಿರುವ ಸಂಕಲನವನ್ನು, ಆಂಗ್ಲ ಭಾಷೆಗೆ ಭಾಷಾಂತರ ಮಾಡಿದ ಹಾರ್ಟ್ ಲ್ಯಾಂಪ್ ಕೃತಿಗೆ ವಿಶ್ವ ಪ್ರಶಸ್ತಿ ಬಂದಿದೆ ಎಂದರು.ಪುರಷರು ಬರೆದ ಸಾಹಿತ್ಯಕ್ಕೆ ಇರುವ ಮಾನ್ಯತೆಯಷ್ಟೆ ಹೆಣ್ಣುಮಕ್ಕಳು ಬರೆದ ಸಾಹಿತ್ಯಕ್ಕೂ ದೊರೆಯಬೇಕು. ಪ್ರತ್ಯೇಕಿಸದೆ ಒಗ್ಗಟ್ಟಿನಿಂದ ಒಳಗೊಳ್ಳುವಿಕೆಯಲ್ಲಿ ಜಗತ್ತು ಬೆಳಗಬೇಕು. ಜನಪರ ವಾದಿಗಳಿಗೆ ಮೂಲಭೂತ ವಾದಿಗಳ ಭಯ, ಆತಂಕ, ದಾಳಿ ಮಾಡುವುದು, ಬಹಿಷ್ಕಾರದ ನೋವುಂಟು ಮಾಡುವ ಸಂದರ್ಭದ ತಲ್ಲಣಗಳನ್ನು ಕುರಿತು ಬಾನು ಮುಸ್ತಾಕ್ ಅವರು ತಮ್ಮ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ ಎಂಬುದನ್ನು ವಿವರಿಸಿದರು.
ಈ ಸಂಚಿಕೆಯಲ್ಲಿ ಕನ್ನಡ ಭಾಷೆ, ಅದರ ಸ್ವರೂಪ, ಸ್ಥಿತಿ, ಸ್ಥಾನ ಮಾನಗಳ ಕುರಿತು ಚಿಂತಿಸಿರುವ ಲೇಖನಗಳಿವೆ. ಸಾಹಿತ್ಯ ಕೃತಿಗಳು, ಅಭಿವೃಚಿ, ಓದುಗರ ದೃಷ್ಟಿ, ಓದುವ ಹಂಬಲವೇ ಕಡಿಮೆ ಆಗುತ್ತಿರುವ ವಿಚಾರವಾಗಿ, ಪುಸ್ತಕದ ಮಹತ್ವ ಕುರಿತು ಮಾತುಗಳಿವೆ. ದತ್ತಿ ಉಪನ್ಯಾಸದಲ್ಲಿ ಒಂದೇ ವಿಚಾರ ಬೇರೆ ಬೇರೆ ಮಾತುಗಳನ್ನು ದಾಖಲಿಸಲಾಗಿದೆ.ಅಸಮಾನತೆ ಅಸಹಿಷ್ಣುತೆ, ಕೋಮುವಾದ ವಿಚಾರಗಳು, ಪರಿಸರಕ್ಕೆ ಸಂಬಂಧಿಸಿದ ಲೇಖನಗಳು ಇಲ್ಲಿವೆ. ಮಡಿವಂತಿಕೆಯಿಲ್ಲದೆ ಎಲ್ಲವನ್ನೂ ಒಳಗೊಂಡಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಮಂಜಪ್ಪ ನಿರೂಪಿಸಿದರು. ಡಾ. ವಿಜಯಾದೇವಿ, ಎಂ.ನವೀನ್ ಕುಮಾರ್, ಕೆ.ಎಸ್.ಹುಚ್ಚರಾಯಪ್ಪ, ಮಂಜುನಾಥ ಕಾಮತ್, ಎಚ್.ಎಸ್.ರಘು, ಮಹಾದೇವಿ, ಎಚ್. ತಿಮ್ಮಪ್ಪ ಭದ್ರಾವತಿ, ಎಂ.ಇ.ಜಗದೀಶ್, ಮೋಹನ್ ಕುಮಾರ್, ಡಿ.ಗಣೇಶ್ ಇತರರು ಹಾಜರಿದ್ದರು.