ಹಾವೇರಿ: ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡಿರುವ ತಮಿಳು ನಟ ಕಮಲಹಾಸನ್ ಕನ್ನಡಿಗರ ಕ್ಷಮೆಯಾಚಿಸುವಂತೆ ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಶುಕ್ರವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಗುತ್ತಲ ರಸ್ತೆಯಲ್ಲಿರುವ ಕರವೇ ಕಚೇರಿಯಿಂದ ಪ್ರತಿಭಟನಾ ಪಾದಯಾತ್ರೆ ಆರಂಭಿಸಿದ ಕಾರ್ಯಕರ್ತರು ಸಂಗೂರ ಕರಿಯಪ್ಪ ವೃತ್ತದ ಮಾರ್ಗವಾಗಿ ಪಿ.ಬಿ. ರಸ್ತೆಯ ಮೂಲಕ ಹೊಸಮನಿ ಸಿದ್ದಪ್ಪ ವೃತ್ತವನ್ನು ತಲುಪಿದರು. ಪಾದಯಾತ್ರೆಯುದ್ದಕ್ಕೂ ಕಮಲಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಬಸಯ್ಯ ಬಸರೀಹಳ್ಳಿಮಠ ಮಾತನಾಡಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ತಮಿಳು ನಟ ಕಮಲಹಾಸನ್ ದುರುದ್ದೇಶಪೂರಿತವಾಗಿ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡಿರುವುದು ರಾಜ್ಯದ ಕನ್ನಡಿಗರನ್ನು ಕೆರಳಿಸಿದೆ.
ಜಿಲ್ಲೆಯ ಚಿತ್ರಮಂದಿರ ಮಾಲೀಕರು ಕಮಲಹಾಸನ್ ನಟನೆಯ ಚಿತ್ರವನ್ನು ಪ್ರದರ್ಶನ ಮಾಡಬಾರದು. ಒಂದುವೇಳೆ ಮಾಡಿದರೆ ಮುಂದಾಗುವ ಅನಾಹುತಗಳಿಗೆ ಚಿತ್ರಮಂದಿರ ಮಾಲೀಕರೆ ಹೊಣೆಯಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ರಾಜ್ಯ ಸಮಿತಿ ಮುಖಂಡ ಸತೀಶಗೌಡ ಮುದಿಗೌಡ್ರ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಗುಡಮಿ, ತಾಲೂಕಾಧ್ಯಕ್ಷ ಹಾಲೇಶ ಹಾಲಣ್ಣನವರ, ಸಂತೋಷ ಪಾಟೀಲ, ಮಾರುತಿ ಪೂಜಾರ, ಕರಿಯಪ್ಪ ಕೊರವರ, ಸಿಕಂದರ ವಾಲಿಕಾರ, ಬಿ.ಎಚ್. ಬಣಕಾರ, ಮುಖಂಡರಾದ ಯಶವಂತಗೌಡ ದೊಡಗೌಡ್ರ, ಹಸನಸಾಬ ಹತ್ತಿಮತ್ತೂರ, ಪರಶುರಾಮ ಈಳಗೇರ, ಅಬ್ಬು ಕೊಡಮಗ್ಗಿ, ನಾಗರಾಜ ಪೂಜಾರ, ಬಸವರಾಜ ಅರಳಿ, ನಾಗರಾಜ ದೇಸಾಯಿ, ಗೌಸಪಾಕ್ ಬಾಲೆಬಾಯಿ, ಸಲೀಂ ದುಕಾಂದರ, ಈರಮ್ಮ ಕಾಡಸಾಲಿ, ಮಂಗಳಾ ಬಾಣಾಪುರ, ಲಕ್ಷ್ಮಿ ನಾಳಕರ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.