ಕಮಲ್‌ ವಿರುದ್ಧ ರಾಜ್ಯಾದ್ಯಂತ ಕರವೇ ಪ್ರತಿಭಟನೆ

KannadaprabhaNewsNetwork |  
Published : May 31, 2025, 01:18 AM IST
ಚಿಕ್ಕಮಗಳೂರಿನಲ್ಲಿ ನಟ ಕಮಲ್‌ ಹಾಸನ್‌ ವಿರುದ್ಧ ಕರವೇಯಿಂದ ಪ್ರತಿಭಟನೆ ನಡೆಸಲಾಯಿತು.  | Kannada Prabha

ಸಾರಾಂಶ

‘ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ’ ಎಂಬ ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು ‘ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ’ ಎಂಬ ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ಬಳ್ಳಾರಿ, ವಿಜಯನಗರ, ಕಲಬುರಗಿ, ಚಿಕ್ಕಮಗಳೂರು, ರಾಮನಗರ, ಕೋಲಾರ, ಹಾವೇರಿ, ರಾಯಚೂರು, ಯಾದಗಿರಿ, ದಾವಣಗೆರೆ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿ, ನಟ ಕಮಲ್‌ ಹಾಸನ್‌ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮೈಸೂರಿನಲ್ಲಿ ಮೈಸೂರು ಕನ್ನಡ ವೇದಿಕೆ ಅವರು ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು. ಗಾಂಧಿ ಚೌಕದಲ್ಲಿ ಕರವೇ ಅವರು ಪ್ರತಿಭಟಿಸಿ ಜೂ.5 ರಂದು ಕಮಲ್ ಹಾಸನ್‌ ಅವರ ಥಗ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಒತ್ತಾಯಿಸಿದರು.

ಇನ್ನು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಮಲ್‌ರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದ ಒಡೆಯರ್ ವೃತ್ತದ ಬಳಿ ಕರವೇ ಕಾರ್ಯಕರ್ತರು, ಕನ್ನಡ ವಿರೋಧಿ ಹೇಳಿಕೆ ನೀಡಿರುವ ಕಮಲ್‌ರ ಪ್ರತಿಕೃತಿ ದಹಿಸುವ ಮೂಲಕ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಕರವೇ ಕಾರ್ಯಕರ್ತರು ಕಮಲ್ ಭಾವಚಿತ್ರವನ್ನು ಚಪ್ಪಲಿಯಲ್ಲಿ ತುಳಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪವಿಭಾಗಾಧಿಕಾರಿ ಮಹೇಶ್ ಅವರಿಗೆ ಮನವಿ ಸಲ್ಲಿಸಿ ಕನ್ನಡಿಗರ ಕ್ಷಮೆ ಕೇಳುವ ತನಕ ಅವರ ಹೊಸ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಕೂಡದು ಎಂದು ಆಗ್ರಹಿಸಿದರು.

ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಕನ್ನಡಪರ ಸಂಘಟನೆ ಅವರು ಪ್ರತಿಭಟನೆ ನಡೆಸಿ ನಟ ಕಮಲ್ ಹಾಸನ್ ಪ್ರತಿಕೃತಿ ದಹಿಸಿ, ಅವರ ಭಾವ ಚಿತ್ರ ತುಳಿದು ಆಕ್ರೋಶ ಹೊರಹಾಕಿದರು.

ಚಿಕ್ಕಮಗಳೂರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕಾರ್ಯಕರ್ತರು ಕಮಲ್ ಹಾಸನ್‌ ಭಾವಚಿತ್ರವನ್ನು ಶೂ ಕಾಲಿನಿಂದ ತುಳಿದು, ಪ್ರತಿಕೃತಿ ದಹಿಸಿ ಕಿಡಿಕಾರಿದರು.

ರಾಯಚೂರಿನ ಲಿಂಗಸುಗೂರು ತಾಲೂಕಿನ ಬಸ್ ನಿಲ್ದಾಣದ ವೃತ್ತದಲ್ಲಿ ಕರವೇ ಕಾರ್ಯಕರ್ತರು ಕಮಲ್ ಹಾಸನ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಗುರು ಭವನದ ಬಳಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಇತರರ ನೇತೃತ್ವದಲ್ಲಿ ಕಮಲ್ ಹಾಸನ್ ವಿರುದ್ಧ ಘೋಷಣೆ ಕೂಗಿ ರಾಜ್ಯದಲ್ಲಿ ಕಮಲ್ ಅಭಿನಯದ ಥಗ್ ಲೈಫ್‌ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಹುಬ್ಬಳ್ಳಿ, ಕೊಪ್ಪಳ, ಗದಗ, ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಟ ಕಮಲ್‌ ಹಾಸನ್‌ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರ ಬಳಿ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ