ಕಾರವಾರ: ನಿರಂತರ 9 ವರ್ಷಗಳಿಗೂ ಹೆಚ್ಚು ಸಮಯದಿಂದ ಸ್ವಚ್ಛತೆ, ಪರಿಸರ ಸಂಬಂಧಿ ಚಟುವಟಿಕೆಯಲ್ಲಿ ನಿರತವಾಗಿರುವ ಪಹರೆ ವೇದಿಕೆ ಪದಾಧಿಕಾರಿಗಳು, ಸದಸ್ಯರು ಶಿರೂರು ಗುಡ್ಡ ಕುಸಿತ ದುರಂತದ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಮಾನವೀಯತೆ ಮೆರೆದು, ಸೇವಾ ದಿನ ಆಚರಿಸಿದರು.
ಪಹರೆ ವೇದಿಕೆ ತನ್ನ 9ನೇ ವರ್ಷದ ಆಚರಣೆಗಾಗಿ ಸಿದ್ಧತೆ ನಡೆಸಿದ ಸಂದರ್ಭದಲ್ಲಿ ಶಿರೂರಿನಲ್ಲಿ ಭೀಕರ ದುರಂತ ಸಂಭವಿಸಿ 11 ಜನರು ಸಾವಿಗೀಡಾಗಿದ್ದರು. ಉಳುವರೆಯ 6 ಮನೆಗಳು ಸಂಪೂರ್ಣ ಕುಸಿದರೆ, 23 ಮನೆಗಳು ಭಾಗಶಃ ಕುಸಿದಿದ್ದವು. ಇದರಿಂದ ಆಚರಣೆಯನ್ನು ಕೈಬಿಟ್ಟು, ಸಂತ್ರಸ್ತರಿಗೆ ನೆರವಾಗಲು ನಿರ್ಧರಿಸಿ, ಪರಿಹಾರ ವಿತರಿಸಿದರು.
ಶಿರೂರು ದುರಂತದಲ್ಲಿ ಮೃತಪಟ್ಟ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಸಣ್ಣು ಗೌಡ ಕುಟುಂಬಕ್ಕೆ ನೆರವು ನೀಡಲಾಯಿತು.ಕಿನ್ನರದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಶನಿವಾರ ಪಹರೆ ಗೌರವಾಧ್ಯಕ್ಷ ಜಿ.ಡಿ. ಮನೋಜೆ ನೇತೃತ್ವದಲ್ಲಿ ಪರಿಹಾರ ನೀಡಲಾಯಿತು.
ಪಹರೆ ವೇದಿಕೆಯ ಟಿ.ಬಿ. ಹರಿಕಾಂತ, ಎಲ್.ಎಸ್. ಫರ್ನಾಂಡಿಸ್, ಪ್ರಕಾಶ ಕೌರ್, ಕೆ.ಡಿ. ಪೆಡ್ನೇಕರ್, ಸುನೀಲ ಸೋನಿ, ಖೈರುನ್ನೀಸಾ ಶೇಖ, ಸುಜಾತಾ ತಾಮ್ಸೆ ಮತ್ತಿತರರು ಇದ್ದರು. ಪಹರೆ ವೇದಿಕೆಯವರು ಸಂತ್ರಸ್ತರಿಗೆ ಅತ್ಯಗತ್ಯವಾದ ಪಾತ್ರೆ, ಪರಿಕರಗಳನ್ನು ವಿತರಿಸಿರುವುದು ನಮಗೆ ಅನುಕೂಲವಾಗಿದೆ. ಇಲ್ಲಿನ ಜನತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂದು ಸಂತ್ರಸ್ತ ವಿನಾಯಕ ಗೌಡ ಹೇಳಿದರು.ನಮ್ಮವರು ಸಂಕಷ್ಟದಲ್ಲಿದ್ದಾಗ ಸ್ಪಂದಿಸಬೇಕಾದದ್ದು ನಮ್ಮ ಕರ್ತವ್ಯ. ಅದಕ್ಕೆ ಪಹರೆ ವೇದಿಕೆಯ ಸಮಾರಂಭವನ್ನು ಕೈಬಿಟ್ಟು ಸಂತ್ರಸ್ತರ ನೆರವಿಗೆ ನಿಲ್ಲುವ ಮೂಲಕ ಸೇವಾ ದಿನವನ್ನು ಆಚರಿಸಿದ್ದೇವೆ ಎಂದು ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.