- ಮುಂದಿನ ದಿನಗಳಲ್ಲಿ ಇನ್ನೂ ಅಕ್ರಮಗಳು ಹೊರಬರಲಿವೆ: ಗೂರಪ್ಪ
ತಾಲೂಕಿನ ದಿದ್ದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚಂಗಿಪುರದಲ್ಲಿ ಅಧ್ಯಕ್ಷೆ ಮತ್ತು ಅವರ ಮಗ ಪಿಡಿಒ ಸೇರಿ ರಿ.ಸ.ನಂ ೧/೬ರ ಸಂತೆ ಮೈದಾನದ ಜಾಗ ಅಕ್ರಮವಾಗಿ ಇ-ಸ್ವತ್ತು ಪಡೆಯಲಾಗಿತ್ತು. ಹುಚ್ಚಂಗಿಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಈಗ ಇ-ಸ್ವತ್ತು ರದ್ದುಗೊಳಿಸಲಾಗಿದೆ. ಇದು ಗ್ರಾಮಸ್ಥರ ಹೋರಾಟಕ್ಕೆ ಸಂದ ಜಯ ಎಂದು ಹುಚ್ಚಂಗಿಪುರ ಗ್ರಾಮ ಮುಖಂಡ, ನಿವೃತ್ತ ಶಿಕ್ಷಕ ಗೂರಪ್ಪ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ. ಸಿಇಒ ಸುರೇಶ್ ಹಿಟ್ನಾಳ್ ಹಾಗೂ ತಾಪಂ ಇಒ ಕೆಂಚಪ್ಪ ಸೇರಿದಂತೆ ಸಂಸದರು, ಶಾಸಕರು ಗ್ರಾಮಸ್ಥರ ಬೆಂಬಲಕ್ಕೆ ನಿಂತಿದ್ದರು. ಇದರಿಂದಾಗಿ ಇ-ಸ್ವತ್ತು ರದ್ದುಗೊಂಡಿದ್ದು, ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.೨೦೦೮ರಲ್ಲಿ ಹುಚ್ಚಂಗಿಪುರದಲ್ಲಿ ಸಂತೆ ಮೈದಾನಕ್ಕೆಂದು ಜಾಗ ಮೀಸಲಿಡಲಾಗಿತ್ತು. ಗ್ರಾಮದ ಕೆಲವು ಸದಸ್ಯರು ಅಕ್ರಮದಲ್ಲಿ ಭಾಗಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಕ್ರಮಗಳು ಹೊರಬರಲಿವೆ. ಈ ವಿಚಾರವಾಗಿ ಪ್ರಾಣ ಬೆದರಿಕೆಗಳು ಬರುತ್ತಿವೆ ಎಂದು ತಿಳಿಸಿದರು.
ಹುಚ್ಚಂಗಿಪುರ ರವಿಕುಮಾರ ಮಾತನಾಡಿ, ತಪ್ಪು ಮಾಡಿದವರ ರಕ್ಷಣೆ ಮಾಡುವ ಕೆಲಸ ಆಗುತ್ತಿದೆ. ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕಾನೂನಿನ ಪ್ರಕಾರ ಶಿಕ್ಷೆ ಆಗದಿದ್ದರೆ, ಗ್ರಾಮದಿಂದ ಪಾದಯಾತ್ರೆ ನಡೆಸಿ, ತಾಲೂಕು ಪಂಚಾಯಿತಿಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
- - -
- ರವಿಕುಮಾರ, ಗ್ರಾಮಸ್ಥ, ಹುಚ್ಚಂಗಿಪುರ
ಸಂತೆ ಜಾಗ ಇ-ಸ್ವತ್ತು ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಹುಚ್ಚಂಗಿಪುರ ಗ್ರಾಮ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.