ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನಲ್ಲಿರುವ ಐಷಾರಾಮಿ ಬ್ಯಾಸ್ಟಿಯನ್ ಪಬ್ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಬುಧವಾರ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

 ಬೆಂಗಳೂರು : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನಲ್ಲಿರುವ ಐಷಾರಾಮಿ ಬ್ಯಾಸ್ಟಿಯನ್ ಪಬ್ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಬುಧವಾರ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ತೆರಿಗೆ ವಂಚನೆ ಆರೋಪ ಹಿನ್ನೆಲೆ

ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ನಗರದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬ್ಯಾಸ್ಟಿಯನ್ ಗಾರ್ಡನ್ ಸಿಟಿ ಪಬ್‌ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಸ್ಟಿಯನ್ ಪಬ್ ನಗರದ ಅತ್ಯಂತ ದುಬಾರಿ ಪಬ್‌ಗಳಲ್ಲಿ ಒಂದಾಗಿದೆ.

ಈಗಾಗಲೇ ಹಲವು ಪ್ರಕರಣಗಳಲ್ಲಿ ವಿಚಾರಣೆ

ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಈಗಾಗಲೇ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಐಟಿ ದಾಳಿ, ಹಿಂದಿನ ಪ್ರಕರಣಗಳ ಮುಂದುವರಿದ ಭಾಗ ಎನ್ನಲಾಗಿದೆ. ಮುಂಬೈ ಐಟಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಮುಂಬೈನ ಹಲವು ಕಡೆಯೂ ತಂಡ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಆರಂಭವಾದ ವಿಚಾರಣೆ ತಡರಾತ್ರಿವರೆಗೂ ಮುಂದುವರಿದಿತ್ತು.

ಇದೇ ಬ್ಯಾಸ್ಟಿಯನ್ ಪಬ್‌ನಲ್ಲಿ ಇತ್ತೀಚೆಗೆ ಉದ್ಯಮಿ ಸತ್ಯ ನಾಯ್ಡು ಎಂಬವರು ಮದ್ಯದ ಅಮಲಿನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ಬಳಿಕ ಆ ಉದ್ಯಮಿ ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದರು. ಈ ಸಂಬಂಧ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.