ರಾಜ್ಯಾದ್ಯಂತ ಇದೇ ತಿಂಗಳ 21ರಿಂದ ಮೂರು ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಹನಿ ಹಾನಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಸುವರ್ಣ ವಿಧಾನಸೌಧ : ರಾಜ್ಯಾದ್ಯಂತ ಇದೇ ತಿಂಗಳ 21ರಿಂದ ಮೂರು ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಹನಿ ಹಾನಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಲಸಿಕಾ ದಿನಾಚರಣೆ
ಸುವರ್ಣ ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಲಸಿಕಾ ದಿನಾಚರಣೆಯ ಅಂಗವಾಗಿ ಪ್ರತೀವರ್ಷದಂತೆ ಈ ವರ್ಷವೂ ಪೋಲಿಯೋ ಲಸಿಕೆ ಅಭಿಯಾನ ಯಶಸ್ವಿಗೊಳಸಲು ನಮ್ಮ ಇಲಾಖೆಯು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಶಾಲೆ, ಕಾಲೇಜು, ಬಸ್, ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಕಾರ್ಯಕರ್ತರು ಪೊಲಿಯೋ ಲಸಿಕೆ ಹಾಕಲಿದ್ದಾರೆ. ಪೋಷಕರು ತಪ್ಪದೆ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಮತ್ತೆ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಭಾರತವು ಪೋಲಿಯೋ ಮುಕ್ತ ರಾಷ್ಟ್ರವಾಗಿ 14 ವರ್ಷ
ಭಾರತವು ಪೋಲಿಯೋ ಮುಕ್ತ ರಾಷ್ಟ್ರವಾಗಿ 14 ವರ್ಷ ಕಳೆದಿದೆ. ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಆಫ್ಘಾನಿಸ್ಥಾನದಲ್ಲಿ ಪೋಲಿಯೋ ಪ್ರಕರಣಗಳು ಈಗಲೂ ಕಂಡುಬಂದಿವೆ. ಈ ದೇಶಗಳಿಂದ ಭಾರತಕ್ಕೂ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತೀ ವರ್ಷ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ ಎಂದು ವಿವರಿಸಿದರು.
21ರಂದು ಬೂತ್‌ಗಳಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಡಿ.22ರಿಂದ ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ಕಾರ್ಯಕ್ರಮ ನಡೆಯಲಿದ್ದು, ವಲಸೆ ಮಕ್ಕಳು, ಸ್ಲಂಗಳಲ್ಲಿರುವ ಮಕ್ಕಳಿಗೆ ಆದ್ಯತೆ ನೀಡಿ ಅವರ ಬಾಯಿಯ ಮೂಲಕ ಎರಡು ಹನಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಮಗು ಸಹ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ಸಲ ಮಾರ್ಚ್‌ನಲ್ಲಿ ಶೇ.102ರಷ್ಟು ಗುರಿ ಸಾಧಿಸಲಾಗಿತ್ತು. ಈ ಬಾರಿಯೂ ನೂರರಷ್ಟು ಗುರಿ ಮುಟ್ಟಲಾಗುವುದು. ರಾಜ್ಯದ 62,40,114 ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಅದಕ್ಕಾಗಿ 22,258 ಬೂತ್‌ಗಳನ್ನು ರಚಿಸಿದ್ದು, 1,030 ಸಂಚಾರಿ ತಂಡಗಳು, 2,096 ಟ್ರಾನ್ಸಿಟ್ ತಂಡಗಳು, 1,12,115 ಲಸಿಕಾ ಕಾರ್ಯಕರ್ತರು, 7,222 ಮೇಲ್ವಿಚಾರಕರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
