ಮಣೇಲ್‌ನಲ್ಲಿ ಅಬ್ಬಕ್ಕ ರಾಣಿ ಗ್ರಾಮೋತ್ಸವ ನಡೆಯಲಿ: ಡಾ.ಚಿನ್ನಪ್ಪ ಗೌಡ

KannadaprabhaNewsNetwork |  
Published : Dec 17, 2025, 03:00 AM IST
ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಡಾ.ಚಿನ್ನಪ್ಪ ಗೌಡ. | Kannada Prabha

ಸಾರಾಂಶ

ಭಾನುವಾರ ಮಳಲಿ ಸರ್ಕಾರಿ ಶಾಲೆಯಲ್ಲಿ ‘ಮಣೇಲ್‌ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರಗೋಷ್ಠಿ ನಡೆಯಿತು.

ಮಂಗಳೂರು: ರಾಣಿ ಅಬ್ಬಕ್ಕನ ಅರಮನೆ ಇದ್ದ ಹಾಗೂ ವಿದೇಶಿ ಪ್ರವಾಸಿಯು ಅಬ್ಬಕ್ಕನನ್ನು ಭೇಟಿ ಮಾಡಿದ ಗಂಜಿಮಠ ಗ್ರಾ.ಪಂ ವ್ಯಾಪ್ತಿಯ ಮಣೇಲಿನಲ್ಲಿ ಅಬ್ಬಕ್ಕ ರಾಣಿಯ ಉತ್ಸವ ಗ್ರಾಮೋತ್ಸವದ ರೂಪದಲ್ಲಿ ಆರಂಭಗೊಳ್ಳಬೇಕು. ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ ‘ಅಬ್ಬಕ್ಕ ಸಾಂಸ್ಕೃತಿಕ ಗ್ರಾಮ’ವನ್ನು ಕಟ್ಟುವ ಕಾರ್ಯ ನಡೆಯಬೇಕು ಎಂದು ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಳಲಿಯ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಮಣೇಲ್ ರಾಣಿ ಅಬ್ಬಕ್ಕ ಚಾವಡಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಳಲಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ ‘ಮಣೇಲ್‌ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಣಿ ಅಬ್ಬಕ್ಕ ಕುರಿತು ಚಾರಿತ್ರಿಕ ಸಾಧನೆಗಳ ಬಗ್ಗೆ ಇನ್ನೂ ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆದಿಲ್ಲ. ಕಳೆದ 30 ವರ್ಷಗಳಿಂದ ಆಕೆಯ ಬಗ್ಗೆ ಅಧ್ಯಯನಗಳು, ಉಳ್ಳಾಲದಲ್ಲಿ ಸ್ಮರಣೀಯ ಕಾರ್ಯಕ್ರಮ ಆರಂಭಗೊಂಡಿದೆ. ಮಣೇಲ್ (ಮಳಲಿ) ಅಬ್ಬಕ್ಕ ನಡೆದಾಡಿದ ಸ್ಥಳವಾಗಿದ್ದು, ಪ್ರಾಕೃತಿಕ, ಭೌತಿಕ, ಸಾಂಸ್ಕೃತಿಕ, ಐತಿಹಾಸಿಕ ಸಂಪನ್ಮೂಲಗಳು ಇವೆ. ಮುಂದಿನ ಪೀಳಿಗೆಗೆ ಆಕೆಯ ಸಮಗ್ರ ಚರಿತ್ರೆ ಪರಿಚಯಿಸುವ ಕೆಲಸ ಇಲ್ಲಿಂದಲೇ ಆರಂಭ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, 135 ವರ್ಷಗಳ ಇತಿಹಾಸವಿರುವ ಮಳಲಿ ಶಾಲೆಯಲ್ಲಿ ಅಬ್ಬಕ್ಕಳ ಬಗ್ಗೆ ನಡೆದ ಗೋಷ್ಠಿ ಸ್ಮರಣೀಯವಾಗಿದ್ದು, ಉಳ್ಳಾಲದ ರಾಣಿ ಅಬ್ಬಕ್ಕನಿಗೆ ಸಂಬಂಧಿಸಿದ ಅರಮನೆಯ ಪಡಿಯಚ್ಚು ಮಳಲಿಯಲ್ಲಿದೆ ಎಂಬುದು ಬಹುಜನರಿಗೆ ಗೊತ್ತಿಲ್ಲ. ಇಲ್ಲಿನ ಶಾಲೆಯ ಭಿತ್ತಿಯಲ್ಲಿ ಅಬ್ಬಕ್ಕಳ ಚಿತ್ರ ಮೂಡಿಸುವ ಕಾರ್ಯ ಅಕಾಡೆಮಿ ವತಿಯಿಂದ ನಡೆಯಲಿದೆ. ಅಬ್ಬಕ್ಕನ ಮಣೇಲ್ ಗ್ರಾಮದ ಚರಿತ್ರೆಯನ್ನು ಜನತೆಗೆ ಮುಟ್ಟಿಸುವ ಕಾರ್ಯವೂ ಆಗಬೇಕಿದೆ ಎಂದರು.ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅವರು ‘ಅಬ್ಬಕ್ಕ: ಚಾರಿತ್ರಿಕ ಅವಲೋಕನ’ ವಿಷಯದಲ್ಲಿ ಉಪನ್ಯಾಸ ನೀಡಿ, ಅಬ್ಬಕ್ಕನ ಬಗ್ಗೆ ಲಭಿಸುವ ಎಲ್ಲ ಚಾರಿತ್ರಿಕ ಕುರುಹುಗಳನ್ನು ಸಂಗ್ರಹಿಸಬೇಕು ಎಂದರು.

ಇತಿಹಾಸ ತಜ್ಞ, ನಿವೃತ್ತ ಉಪನ್ಯಾಸಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು ‘ಮಣೇಲ್‌ ಗ್ರಾಮದಲ್ಲಿ ಅಬ್ಬಕ್ಕನನ್ನು ಭೇಟಿ ಮಾಡಿದ ಪ್ರವಾಸಿ’ ವಿಷಯದ ಕುರಿತು ಮಾತನಾಡಿದರು. 400 ವರ್ಷಗಳ ಹಿಂದೆ 1623ರ ಡಿಸೆಂಬರ್ ತಿಂಗಳ 5, 6 ಹಾಗೂ 7ರಂದು ಇಟಲಿ ಪ್ರವಾಸಿ ಪಿಯಾತ್ರೋ ದಲ್ಲವೆಲ್ಲೆ ಮಣೇಲ್ ಗ್ರಾಮಕ್ಕೆ ಭೇಟಿ ನೀಡಿ ಅಬ್ಬಕ್ಕನನ್ನು ಮಾತನಾಡಿಸಿದ್ದರು ಹಾಗೂ ಮಣೇಲ್ ಗ್ರಾಮದ ಪ್ರಾಕೃತಿಕ ಹಿನ್ನೆಲೆಯನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.ಗಂಜಿಮಠ ಗ್ರಾ.ಪಂ. ಉಪಾಧ್ಯಕ್ಷೆ ಸಾರಮ್ಮ, ಕಟ್ಟೆಮಾರ್ ಮನೆತನದ ಪ್ರಶಾಂತ್ ಕುಮಾರ್ ಕಟ್ಟೆಮಾರ್, ಪಂಚಾಯ್ತಿ ಮಾಜಿ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕ ಡಾ.ಮಹೇಶ್, ಚಿತ್ರ ಕಲಾವಿದ ಗಣೇಶ್ ಸೋಮಯಾಜಿ, ಗುಣಪಾಲ ಮೇಂಡ, ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಪೂಜಾರಿ, ಉಳಿಪಾಡಿಗುತ್ತು ಉದಯ ಕುಮಾರ್ ಆಳ್ವ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಅಕ್ಷಯ ಆರ್. ಶೆಟ್ಟಿ, ಬಾಬು ಕೊರಗ ಪಾಂಗಾಳ ಮತ್ತಿತರರು ಇದ್ದರು.

ಗ್ರಾಮದ ಪ್ರಮುಖರ ಪಾಲ್ಗೊಳ್ಳುವಿಕೆಯಲ್ಲಿ ಕಟ್ಟೆಮಾರ್ ಅರಮನೆಯಿಂದ ಮಳಲಿ ಶಾಲೆವರೆಗೆ ಸಾಂಸ್ಕೃತಿಕ ನಡಿಗೆ ನಡೆಯಿತು. ನಿವೃತ್ತ ಪ್ರಾಂಶುಪಾಲ ಪ್ರೊ. ಅಕ್ಷಯ್ ಕುಮಾರ್ ಜೈನ್ ನಿರೂಪಿಸಿದರು. ಶಿಕ್ಷಕ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಸಂಚಾಲಕ ಬೂಬ ಪೂಜಾರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ