ಬಿಡಿಸಿಸಿ ಠೇವಣಿ 10 ಸಾವಿರ ಕೋಟಿಗೇರಿಸುವ ಉದ್ದೇಶ

KannadaprabhaNewsNetwork |  
Published : Dec 17, 2025, 03:00 AM IST
ಬೆಳಗಾವಿಯಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ಸೌಹಾರ್ದಯುತ ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಭಿವೃದ್ಧಿಗೆ ಹಲವಾರು ರೈತಪರ ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದ್ದು, ಈಗಿರುವ ₹ 6 ಸಾವಿರ ಕೋಟಿ ಠೇವಣಿಯನ್ನು ಮುಂದಿನ ದಿನಗಳಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಭಿವೃದ್ಧಿಗೆ ಹಲವಾರು ರೈತಪರ ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದ್ದು, ಈಗಿರುವ ₹ 6 ಸಾವಿರ ಕೋಟಿ ಠೇವಣಿಯನ್ನು ಮುಂದಿನ ದಿನಗಳಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ನಗರದ ಧರ್ಮನಾಥ ಭವನದಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆಸಿದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಹೆಮ್ಮೆಯ ಬ್ಯಾಂಕ್‌ನ್ನು ರಾಜ್ಯದಲ್ಲಿಯೇ ಮಾದರಿ ಮಾಡುವ ಸಂಕಲ್ಪವನ್ನು ಇಟ್ಟುಕೊಂಡಿದ್ದೇವೆ. ಅದಕ್ಕೆ ತಮ್ಮೆಲ್ಲರ ಸಹಾಯ-ಸಹಕಾರ ಅಗತ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ಮುಂದಾಳತ್ವದಲ್ಲಿ ಬ್ಯಾಂಕ್ ಶ್ರೇಯೋಭಿವೃದ್ಧಿಗೆ ಕಂಕಣಬದ್ದರಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಪ್ರತಿ ಕೆಲಸ- ಕಾರ್ಯಗಳಲ್ಲಿ ಬ್ಯಾಂಕ್‌ನ ನಿರ್ದೇಶಕರು ಮತ್ತು ಸಹಕಾರಿ ಸಂಘಗಳ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್‌ನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು. ರೈತರ ಸ್ವಾವಲಂಬಿ ಬದುಕಿಗೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದ್ದೇವೆ. ಸಹಕಾರ ತತ್ವದಡಿ ಎಲ್ಲರೂ ಪಕ್ಷ ಬೇಧ ಮರೆತು ಒಂದಾಗಿ ದುಡಿಯುತ್ತೇವೆ. ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. ಸಂಘಗಳ ಆಡಳಿತ ಮಂಡಳಿ, ಸಿಬ್ಬಂದಿ ಮಧ್ಯ ಉತ್ತಮ ಹೊಂದಾಣಿಕೆ ಇರಬೇಕು. ಅಂದಾಗ ಮಾತ್ರ ಸಂಘಗಳು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತವೆ. ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ರೈತರೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಸಂಘಗಳು ಬೆಳೆಯಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಮುರಗೋಡ ಮಹಾಂತಜ್ಜನವರ ಆಶೀರ್ವಾದದಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ಶತಮಾನದ ಸಂಭ್ರಮದಲ್ಲಿದೆ. ಶತ ಸಂಭ್ರಮವನ್ನು ಅತೀ ಅದ್ದೂರಿಯಾಗಿ ಆಚರಿಸಲು ಯೋಜನೆಗಳನ್ನು ಹಾಕಿಕೊಂಡಿವೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ಗೆ ಅಣ್ಣಾಸಾಹೇಬ ಜೊಲ್ಲೆಯಂತಹ ನುರಿತ ಅಧ್ಯಕ್ಷರು ಸಿಕ್ಕಿರುವುದು ಎಲ್ಲರ ಸುದೈವ. ಬ್ಯಾಂಕಿಂಗ್ ಸೇವೆಯಲ್ಲಿ ಅಪಾರ ಅನುಭವವಿರುವ ಜೊಲ್ಲೆಯವರ ಮುಂದಾಳುತನದಲ್ಲಿ ನಮ್ಮ ‌ಡಿಸಿಸಿ ಬ್ಯಾಂಕ್ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡಿ ಜನರ ಮನಸ್ಸನ್ನು ಗೆಲ್ಲುವ ವಿಶ್ವಾಸವಿದೆ. ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿ ಪ್ರಾಮಾಣಿಕವಾಗಿ ದುಡಿದರೆ ಮಾತ್ರ ಸಂಘಗಳು ಬಲವರ್ಧನೆಯಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್‌ ಮುಂದಿನ ದಿನಗಳಲ್ಲಿ ರೈತ ಸ್ನೇಹಿ ಯೋಜನೆಗಳನ್ನು ಅನುಷ್ಠಾನ ಮಾಡುವ ಸಂಕಲ್ಪ ನಮಗಿದೆ ಎಂದು ಹೇಳಿದರು.ವೇದಿಕೆಯಲ್ಲಿ ಬ್ಯಾಂಕ್‌ ಆಡಳಿತ ಮಂಡಳಿ ಸದಸ್ಯರಾದ ಅಪ್ಪಾಸಾಹೇಬ ಕುಲಗೋಡೆ, ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ನೀಲಕಂಠ ಕಪ್ಪಲಗುದ್ದಿ, ರಾಹುಲ್ ಜಾರಕಿಹೊಳಿ, ನಾನಾಸಾಹೇಬ ಪಾಟೀಲ, ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಕಲಾವಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.------

ಕೋಟ್‌

ಬ್ಯಾಂಕ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗೆ ವಿಮಾ ಸೌಲಭ್ಯ ಮಾಡಿಸುವ ಕ್ರಮ ಕೈಕೊಳ್ಳಲಾಗಿದೆ. ಈ ವಿನೂತನ ಕಾರ್ಯಕ್ಕೆ ದಸ್ಯರು ಬೆಂಬಲ ಸೂಚಿಸಿದ್ದಾರೆ. ಅಪಘಾತ, ಸಹಜ ಸಾವು ಮತ್ತು ಆರೋಗ್ಯ ವಿಮೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ. ತಲಾ ₹ 5 ಲಕ್ಷವರೆಗೆ ಅಪಘಾತ ವಿಮೆ ಮತ್ತು ಸಹಜ ಸಾವು ವಿಮೆ ಹಾಗೂ ₹ 1 ಲಕ್ಷವರೆಗಿನ ಆರೋಗ್ಯ ವಿಮೆ ಜಾರಿ ಮಾಡಲು ಯೋಚಿಸಿದ್ದೇವೆ. ಸೊಸೈಟಿಗಳ ಸಿಬ್ಬಂದಿ ಈ ವ್ಯಾಪ್ತಿಗೆ ಒಳಪಡಲಿದ್ದು, ಸುಮಾರು 3 ಸಾವಿರ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಇದಕ್ಕಾಗಿ ಡಿಸಿಸಿ ಬ್ಯಾಂಕ್ ಶೇ.40 ರಷ್ಟು ಹಣ ಹೂಡಲಿದೆ. ಮಿಕ್ಕ ಶೇ.60 ರಷ್ಟನ್ನು ಹಣವನ್ನು ಸೊಸೈಟಿಗಳು ಶೇ.30 ಮತ್ತು ಶೇ.30 ರಷ್ಟು ಸೊಸೈಟಿ ಸಿಬ್ಬಂದಿ ಭರಿಸಬೇಕು.ಅಣ್ಣಾಸಾಹೇಬ ಜೊಲ್ಲೆ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ