ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಚರ್ಮರೋಗ ವಿಭಾಗದ ಪ್ರಾಧ್ಯಾಪಕ ಮತ್ತು ಖ್ಯಾತ ತಜ್ಞ ಡಾ.ಅರುಣ ಇನಾಮದಾರ ಅಧಿಕಾರ ಸ್ವೀಕರಿಸಿದರು. ಈವರೆಗೆ ಹಂಗಾಮಿ ಕುಲಪತಿಯಾಗಿದ್ದ ಅವರು, ಈಗ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ.ಬಿ.ಪಾಟೀಲ ಹಾಗೂ ಡೀಮ್ಡ್ ವಿವಿ ಕುಲಾಧಿಪತಿ ಬಿ.ಎಂ.ಪಾಟೀಲ ಪರವಾಗಿ ಶುಭ ಹಾರೈಸಿದರು. ಇವರ ನೇತೃತ್ವದಲ್ಲಿ ಬಿಎಲ್‌ಡಿಇ ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ಗುಣಮಟ್ಟದ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಿ ಎಂದು ಉಪಸ್ಥಿತರಿದ್ದ ವಿವಿ ಅಧಿಕಾರಿಗಳು ಶುಭ ಹಾರೈಸಿದರು.

ಪರೀಕ್ಷೆ ನಿಯಂತ್ರಣಾಧಿಕಾರಿ ಡಾ.ಶಶಿಧರ ದೇವರಮನಿ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ತೇಜಶ್ವಿನಿ ವಲ್ಲಭ, ಅಲೈಡ್ ಹೆಲ್ತ್ ಸಾಯಿನ್ಸ್ ಡೀನ್ ಡಾ.ಎಸ್.ವಿ.ಪಾಟೀಲ, ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಉಪಪ್ರಾಚಾರ್ಯ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಶರೀರಕ್ರಿಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಕುಶಾಲ ದಾಸ, ಸಂಶೋಧನಾ ಕೋಶ, ನಿದೇರ್ಶಕ ಡಾ.ಎಂ.ಎಂ.ಪಾಟೀಲ, ಉಪಕುಲಸಚಿವ ಸತೀಶ ಪಾಟೀಲ, ವೈದ್ಯಕೀಯ ಉಪಅಧೀಕ್ಷಕ ಡಾ.ರವಿಕುಮಾರ ಬಿರಾದಾರ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಡಾ.ಅರುಣ ಇನಾಮದಾರ ಅನುಭವ

ಡಾ.ಅರುಣ ಇನಾಮದಾರ ಅವರು ವೈದ್ಯಕೀಯ ಶಿಕ್ಷಣ, ಮಕ್ಕಳ ಚರ್ಮರೋಗ ಶಾಸ್ತ್ರ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಎಲ್‌ಡಿಇ ವಿಶ್ವವಿದ್ಯಾಲಯದ, ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ, ಚರ್ಮರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅನೇಕ ಯುವ ವೈದ್ಯರಿಗೆ ಮಾರ್ಗದರ್ಶಕರಾಗಿ, ವೃತ್ತಿಪರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಈ ಹಿಂದೆ ಇಂಡಿಯನ್ ಅಸೋಸಿಯೇಷನ್ ಆಫ್ ಡೆರ್ಮಟಾಲಜಿಟ್ಸ್‌ (IADVL) ಸೇರಿದಂತೆ ಪ್ರಮುಖ ಮಂಡಳಿಗಳಲ್ಲಿ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಭಾರತೀಯ ವೈದ್ಯರ ಸಂಘದಿಂದ ರಾಷ್ಟ್ರೀಯ ಅತ್ಯುತ್ತಮ ವೈದ್ಯಕೀಯ ಶಿಕ್ಷಕ ಪ್ರಶಸ್ತಿ, ಐಎಡಿವಿಎಲ್ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ, ಹಾಗೂ ಅಮೆರಿಕದ ಅಂತಾರಾಷ್ಟ್ರೀಯ ಸಂಘದಿಂದ ಅತ್ಯುತ್ತಮ ಮಕ್ಕಳ ಚರ್ಮರೋಗ ತಜ್ಞ ಪ್ರಶಸ್ತಿಗಳನ್ನು ಪಡೆದಿದ್ದಾರೆ.