ಹುಬ್ಬಳ್ಳಿ:
ಇಲ್ಲಿನ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಶ್ರೀ, ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ಸಿದ್ಧರಾಮ ಶ್ರೀ, ಹಾವೇರಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ, ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ಬಿಜಕಲ್ಲ ವಿರಕ್ತ ಮಠದ ಶಿವಲಿಂಗ ಶ್ರೀ, ಬೊಮ್ಮನಹಳ್ಳಿಯ ಶಿವಯೋಗೀಶ್ವರ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಹಲವು ಮಠಾಧೀಶರು, ಸರ್ಕಾರವು ಆದಷ್ಟು ಬೇಗನೆ ಕೊಲೆ ಆರೋಪಿಯನ್ನು ಬಂಧಿಸಿ ಅವನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಅಂಜಲಿ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಂಜಲಿ ಕುಟುಂಬಕ್ಕೆ ಶ್ರೀಗಳು ಅಭಯ ಹಸ್ತ ನೀಡಿದರು.ನೆಲದ ಕಾನೂನಿನ ಭಯವೇ ಇಲ್ಲ:
ಈ ನೆಲದ ಕಾನೂನಿನ ಬಗ್ಗೆ ಯಾವ ಭಯವೇ ಇಲ್ಲದಂತಾಗಿದೆ. ಕಾನೂನು ಉಳಿಸಿಕೊಳ್ಳಬೇಕಾದರೆ ಸರ್ಕಾರ ಅಂಜಲಿ ಹತ್ಯೆ ಆರೋಪಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ನೇಹಾ ಹತ್ಯೆ ನಂತರ ಮತ್ತೊಂದು ಅಮಾನುಷ ಘಟನೆ ನಡೆದಿದೆ. ಒಬ್ಬ ಯುವಕ ಮನೆಗೆ ನುಗ್ಗಿ ನಿರ್ಭಯವಾಗಿ ಕೊಲೆ ಮಾಡಿದ್ದಾನೆ. ಈ ನೆಲದ ಕಾನೂನಿನ ಬಗ್ಗೆ ಯಾವ ಭಯವೇ ಉಳಿದಂತಾಗಿದೆ. ಈ ಪರಿಸ್ಥಿತಿಯಲ್ಲಿ ಇಡೀ ಸಮಾಜ ಇಂತಹ ನೊಂದವರ ಪರವಾಗಿ ಬೆಂಬಲಕ್ಕೆ ನಿಲ್ಲಬೇಕು. ನೇಹಾ ಹತ್ಯೆ ಆದ ನಂತರ ಇಂತಹ ಮತ್ತೊಂದು ಸಂದರ್ಭ ಪದೇ ಪದೇ ಬರಬಾರದಿತ್ತು. ಈ ಮನೆಯಲ್ಲಿ ಯಾರಾದರೂ ಓದುವವರು ಇದ್ದರೆ ನಮ್ಮ ಮಠದಿಂದ ಉಚಿತ ಶಿಕ್ಷಣ ನೀಡುವುದಾಗಿ ಶ್ರೀಗಳು ಭರವಸೆ ನೀಡಿದರು.