ಸಿದ್ದಾಪುರ: ತಾಲೂಕಿನ ಹಿತ್ಲಕೊಪ್ಪ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರನ್ನು ಬಲವಂತವಾಗಿ ಕರೆದೊಯ್ದಿರುವುದಲ್ಲದೇ ಕೆಲವು ಸದಸ್ಯರ ಮೇಲೆ ಧಮ್ಕಿ ಹಾಕುವ ಮೂಲಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಹಕಾರಿ ವ್ಯವಸ್ಥೆಯನ್ನು ಹದಗೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಆರೋಪಿಸಿದ್ದಾರೆ.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಹಿತ್ಲಕೊಪ್ಪ ಸಹಕಾರಿ ಸಂಘದಲ್ಲಿ ೧೨ ಸದಸ್ಯರಿದ್ದೇವೆ. ಎಲ್ಲರೂ ಒಂದೇ ನಾಯಕತ್ವದಡಿ ಇದ್ದವರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗುಂಪಿನವರು ಒಬ್ಬರೂ ಇರದ ಕಾರಣ ಈಗ ನಮ್ಮಲ್ಲಿ ಕೆಲವರನ್ನು ಹಲವು ಆಮಿಷದಿಂದಲೂ, ಬೆದರಿಸಿಯೂ ತಮ್ಮದೊಂದು ಗುಂಪನ್ನು ಮಾಡಿದ್ದಾರೆ. ಇದರ ನಡುವೆಯೂ ನಮ್ಮ ಗುಂಪಿನಲ್ಲಿ ಬಹುಮತವಿತ್ತು. ಬರಲಿರುವ ಕೆಡಿಸಿಸಿ ಚುನಾವಣೆಯಲ್ಲಿ ಮತದಾನ ಮಾಡಲು ಒಬ್ಬರನ್ನು ಚುನಾಯಿಸಬೇಕಿತ್ತು. ಈ ಸಂಬಂಧ ನಾವೆಲ್ಲರೂ ಒಂದು ಕಡೆ ಸೇರುವ ಸಮಯದಲ್ಲಿ ಸಂಘದ ಉಪಾಧ್ಯಕ್ಷ ಬಿಳಿಯ ಗೊಂಡಾ ಎನ್ನುವವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಲವಂತವಾಗಿ ಕರೆದುಕೊಂಡು ಹೋದರು. ಅವರ ಹೆಂಡತಿ ಹಾಗೂ ನಾವೆಲ್ಲ ಸೇರಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ನಿರ್ಧರಿಸಿದಾಗ ಅವರನ್ನು ತಂದು ಠಾಣೆಯ ಹತ್ತಿರ ಬಿಟ್ಟರು. ಅದೇ ದಿನ ಸಂಜೆ ಇನ್ನೊಬ್ಬ ಸದಸ್ಯೆ ಮಂಜಮ್ಮ ಎನ್ನುವವರ ತಂಗಿಯ ಮಗನ ಮನೆಗೆ ಹೋಗಿ ಹೆಂಗಸರು ಮಕ್ಕಳಿಗೆ ಧಮ್ಕಿ ಹಾಕಿದರು. ಈ ಬಗ್ಗೆ ದೂರು ಸಹ ದಾಖಲಾಗಿದೆ. ಆದರೆ ಈವರೆಗೂ ಅವರ ಮೇಲೆ ಕ್ರಮ ಜರುಗಿಸಿಲ್ಲ. ಈ ಹಿಂದೆಯೂ ಅವರ ಮೇಲೆ ಹಲವು ಪ್ರಕರಣ ದಾಖಲಾಗಿದೆ. ಆದರೆ ಕ್ರಮವನ್ನೇ ತೆಗೆದುಕೊಂಡಿಲ್ಲ. ಇದರಿಂದ ತಾಲೂಕಿನ ಜನರು ಭಯಭೀತರಾಗಿದ್ದಾರೆ. ಬಹುಶಃ ಈ ಮನುಷ್ಯನ ಬಗ್ಗೆ ಪೊಲೀಸ್‌ರಿಗೂ ಭಯವಿರುವ ಹಾಗಿದೆ ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ, ಪ್ರಮುಖರಾದ ತೊಟಪ್ಪ ನಾಯ್ಕ, ಅಣ್ಣಪ್ಪ ನಾಯ್ಕ, ಜಿ.ಕೆ.ನಾಯ್ಕ, ಹಿತ್ತಲಕೊಪ್ಪ ಸಹಕಾರಿ ಸಂಘದ ಅಧ್ಯಕ್ಷ ವಿಜೇತ ಗೌಡರ್, ಕವಂಚೂರು ಸೇ.ಸ.ಸಂಘದ ಉಪಾಧ್ಯಕ್ಷ ಬಿಳಿಯಾ ಗೊಂಡಾ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.