ಹೊಸಪೇಟೆ: ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವಸತಿ ಶಾಲೆ ಸಿಬ್ಬಂದಿಗೆ ವಸತಿಗೃಹ ಕಟ್ಟಡ ನಿರ್ಮಾಣಕ್ಕೆ ಸುಮಾರು ₹6.33 ಕೋಟಿ ವೆಚ್ಚದಲ್ಲಿ 2 ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಒಂದು ಕಟ್ಟಡದಲ್ಲಿ 1 ಬಿಎಚ್‌ಕೆ ಹೊಂದಿರುವ 12 ಕೋಣೆ ಒಳಗೊಂಡ ಕಟ್ಟಡ ಮತ್ತೊಂದು ಕಟ್ಟಡದಲ್ಲಿ 2 ಬಿಎಚ್‌ಕೆ 12 ಕೋಣೆಗಳಿರುವ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ನಗರದ ಹೊರವಲಯದಲ್ಲಿನ ಜಂಬುನಾಥ ರಸ್ತೆಯಲ್ಲಿನ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವಸತಿ ಶಾಲೆ ಸಿಬ್ಬಂದಿಗೆ ವಸತಿಗೃಹ ಕಟ್ಟಡ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 6 ರಿಂದ 12ನೇ ತರಗತಿವರೆಗೆ ಒಟ್ಟು 450ಕ್ಕೂ ಅಧಿಕ ಮಕ್ಕಳಿಗೆ ವಸತಿಯುತ ವಿದ್ಯಾಭ್ಯಾಸ ಒದಗಿಸಲಾಗುತ್ತಿದೆ. ಇಲ್ಲಿನ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಸತಿ ಶಾಲೆಯ ಆವರಣದಲ್ಲಿ ಹೈಮಾಸ್ಟ್ ದೀಪ ಮತ್ತು ಸಿಸಿಟಿವಿ ಅಳವಡಿಸಲು ಕ್ರಮ ವಹಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಎಚ್.ಆರ್. ಗವಿಯಪ್ಪ ವಸತಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಿದರು.ಈ ವೇಳೆ ಕುಡಿಯುವ ನೀರಿನ ಸಮಸ್ಯೆ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ವಿದ್ಯಾರ್ಥಿಯೊಬ್ಬರು ಮನವಿ ಮಾಡಿದರು. ಹಾಗೆಯೇ ವಸತಿ ನಿಲಯಗಳಲ್ಲಿ ಶೌಚಾಲಯ ಹದಗೆಟ್ಟಿವೆ ಎಂದು ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತಕ್ಷಣವೇ ದುರಸ್ತಿಗೊಳಿಸುವಂತೆ ನಿರ್ದೇಶನ ನೀಡಿದರು. ಹಾಗೆಯೇ 6 ರಿಂದ 12ನೇ ತರಗತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪೂರ್ಣಗೊಂಡ ವಸತಿ ನಿಲಯ ಮತ್ತು ಭೋಧನಾ ಕೊಠಡಿಗಳನ್ನು ಬಳಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಾವೀದ್ ಖರಂಗಿ, ಪ್ರಾಂಶುಪಾಲ ಪರಶುರಾಮ್ ಸೇರಿದಂತೆ ವಸತಿಶಾಲೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.