ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ಎಸ್ಟಿ ನಿಗಮ, ಅಬಕಾರಿ, ಮೂಡಾ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಹಣವನ್ನು ಲೂಟಿ ಮಾಡಿದ್ದಾರೆ.
ಹರಪನಹಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಸೇರಿ ದಾವಣಗೆರೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಲಿದೆ ಎಂದು ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ಎಸ್ಟಿ ನಿಗಮ, ಅಬಕಾರಿ, ಮೂಡಾ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಹಣವನ್ನು ಲೂಟಿ ಮಾಡಿದ್ದಾರೆ. ಇದರ ವಿರುದ್ಧ ನಾವು ಸಂಘಟಿತರಾಗಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್‌ಜಿ ಸೇರಿದಂತೆ ಜನಪರ ಯೋಜನೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಹರಪನಹಳ್ಳಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ನೀರಾವರಿಗೆ ಹೆಚ್ಚು ಆದ್ಯತೆ ಸಿಗಬೇಕಿದೆ ಮುಂದೆ ಬಿಜೆಪಿಯಿಂದ ಯಾರೆ ಗೆದ್ದು ಬಂದರೂ ಮೊದಲು ನೀರಾವರಿಗೆ ಒತ್ತು ಕೊಡಬೇಕು ಎಂದು ಹೇಳಿದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಚಿವರು ತಪ್ಪು ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಕುರ್ಚಿಗಾಗಿ ಎಲ್ಲ ಮರೆ ಮಾಚುತ್ತಿದ್ದಾರೆ. ಇಂತಹ ದುರಾಡಳಿತ ಸರ್ಕಾರದ ವಿರುದ್ಧ ಜನರಿಗೆ ತಿಳಿವಳಿಕೆ ಹೇಳಬೇಕು ಎಂದು ಹೇಳಿದರು.
ಹರಪನಹಳ್ಳಿಯಲ್ಲಿ ಬಿಜೆಪಿಗೆ ತನ್ನದೇ ಆದ ಶಕ್ತಿ ಇದೆ. ಆದರೆ ಇಲ್ಲಿ ಹೊಂದಾಣಿಕೆ ಕೊರತೆ ಇದೆ. ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ಕಾರ್ಯಕರ್ತರಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಸೂಕ್ತ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿದೆ. ಕಾರ್ಯಕರ್ತರು ಯಾವುದೇ ಆತಂಕ ಪಡುವ ಆವಶ್ಯಕತೆ ಇಲ್ಲ. ಮುನ್ನುಗಿದರೆ ಹೋರಾಟಕ್ಕೆ ಜಯ ಸಿಗಲಿದೆ ಎಂದರು.
ಮಾಜಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಟಿಕೆಟ್ ಪಡೆಯುವುದು ಅಷ್ಟು ಸುಲಭವಲ್ಲ. ಆಕಾಂಕ್ಷಿಗಳು ಎಲ್ಲ ರೀತಿಯಲ್ಲಿ ಸಿದ್ಧರಾಗಿರಬೇಕು. ಅವರು ಸರ್ಪ ಅಸ್ತ್ರ ಬಿಟ್ಟರೆ, ನೀವು ಗರುಡ ಅಸ್ತ್ರ ಬಿಡಬೇಕು. ಇಂದಿನ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ. ಎಲ್ಲರೂ ಸಿದ್ಧರಾಗಿ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ವಿಕಸಿತ ಭಾರತ ಮೋದಿ ಕನಸಾಗಿತ್ತು. ಹಾಗಾಗಿ ವಿಬಿಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಯಾವುದೇ ಅಭಿವೃದ್ಧಿ ಇಲ್ಲ. ಶಾಸಕರು ಮಜಾ ಮಾಡಲು ಟೂರ್ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ರಾಜ್ಯ ಸೌಹಾರ್ದ ಬ್ಯಾಂಕಿನ ರಾಜ್ಯಾಧ್ಯಕ್ಷ ಜಿ.ನಂಜನಗೌಡ, ಡಾ.ರಮೇಶಕುಮಾರ್, ಬಿಡಿಸಿಸಿ ನಿರ್ದೇಶಕ ವೈ.ಡಿ. ಅಣ್ಣಪ್ಪ, ಮುತ್ತಿಗಿ ವಾಗೀಶ, ಕಂಚಿಕೇರಿ ಶಾನಬೋಗರ, ಕೆಂಚಪ್ಪ ಮಾತನಾಡಿದರು. ಕಣಿವಿಹಳ್ಳಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಎಂ.ಪಿ. ನಾಯ್ಕ್, ಸತ್ತೂರು ಹಾಲೇಶ, ನಿಟ್ಟೂರು ಸಣ್ಣಹಾಲಪ್ಪ, ಓಂಕಾರಗೌಡ, ಬಿ.ವೈ. ವೆಂಕಟೇಶ, ವಕೀಲ ಪ್ರಾಣೇಶ, ಇಜಂತ್ಕರ್ ಮಂಜುನಾಥ, ಮೈದೂರು ಮಲ್ಲಿಕಾರ್ಜುನ, ಚನ್ನನಗೌಡ, ಜವಳಿ ಮಹೇಶ್, ಗಿರಜ್ಜಿ ನಾಗರಾಜ, ವಡ್ಡಿನ ದಾದಾಪುರ ಶಿವಾನಂದ, ನವೀನ ಬೂದಿ, ಬಾಗಳಿ ಜಗದೀಶ, ಗುಂಡಿ ಮಂಜುನಾಥ, ಮೈದೂರು, ಚಂದ್ರಶೇಖರ, ಮಾರುತಿ, ರವಿ ಬಾರ್ಕಿ, ಕಡತಿ ರಮೇಶ, ಕುಸುಮ ಜಗದೀಶ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.