ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಕ್ಯಾಪ್ಟನ್ ಅಭಿಮನ್ಯು ರಾಜ ಬೀದಿಯಲ್ಲಿ ಮೊದಲ ದಿನವೇ ಗಾಂಭೀರ್ಯದಿಂದ ಮರದ ಅಂಬಾರಿ ಹೊತ್ತು ಬೀಗಿದನು.
ಅರಮನೆ ಆವರಣದಿಂದ ಸಂಜೆ 5.50ಕ್ಕೆ ಹಿರಣ್ಯಾ ಮತ್ತು ಲಕ್ಷ್ಮೀ ಜತೆ ಬನ್ನಿಮಂಟಪದತ್ತ ಹೆಜ್ಜೆ ಹಾಕಿದ. ಈ ವೇಳೆ ಮಹೇಂದ್ರ, ಧನಂಜಯ, ಭೀಮ, ಪ್ರಶಾಂತ, ಗೋಪಿ, ಕಂಜನ್, ಸುಗ್ರೀವ, ರೋಹಿತ, ಏಕಲವ್ಯ, ದೊಡ್ಡಹರವೇ ಲಕ್ಷ್ಮೀ, ವರಲಕ್ಷ್ಮೀ ಆನೆಗಳು ಅಭಿಮನ್ಯುವನ್ನು ಅನುಸರಿಸಿದವು.ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಅಭಿಮನ್ಯುವಿನ ಹೆಗಲಿಗೆ ಗಾದಿ ಮತ್ತು ನಮ್ದು ಬಿಗಿಯಲಾಯಿತು. ನಂತರ ರಾಜವಂಶಸ್ಥರ ಖಾಸಗಿ ನಿವಾಸದ ಬಳಿ ಮರದ ಅಂಬಾರಿ ಕಟ್ಟಲಾಯಿತು.
ಹಿರಣ್ಯಾ ಮತ್ತು ಲಕ್ಷ್ಮೀಯೊಂದಿಗೆ 280 ಕೆಜಿ ತೂಕದ ಮರದ ಅಂಬಾರಿ ಹಾಗೂ ಗಾದಿ, ನಮ್ದ ಮತ್ತು ಮರಳಿನ ಮೂಟೆ ಸೇರಿ ೭೫೦ ಕೆಜಿ ಭಾರ ಹೊತ್ತು ಅರಮನೆಯಿಂದ ಬನ್ನಿ ಮಂಟಪದವರೆಗೆ ಅಭಿಮನ್ಯು ಸಾಗಿದ.
ಬಳಿಕ ಬನ್ನಿಮಂಟಪದಿಂದ ಅರಮನೆಗೆ ಯಾವ ಆಯಾಸವೂ ಇಲ್ಲದೆ ಆನೆಗಳು ಹಿಂದಿರುಗಿ ತಾಲೀಮು ಯಶಸ್ವಿಗೊಳಿಸಿದವು.
ಈ ಹಿಂದೆ ಧನಂಜಯ, ಭೀಮ ಹಾಗೂ ಮಹೇಂದ್ರ ಆನೆಗಳು ಅರಮನೆಯಿಂದ ಬನ್ನಿಮಂಟಪದವರೆಗೆ ಯಶಸ್ವಿಯಾಗಿ ಮರದ ಅಂಬಾರಿ ಹೊತ್ತಿರುವುದು ವಿಶೇಷವಾಗಿದೆ. ಮರದ ಅಂಬಾರಿ ಮತ್ತು ಗಜಪಡೆಯ ಪೂಜಾ ಕಾರ್ಯಕ್ರಮದಲ್ಲಿ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಎಸಿಪಿ ಚಂದ್ರಶೇಖರ್, ವೈದ್ಯ ಮುಜೀಬ್, ಆರ್ಎಫ್ಒ ಸಂತೋಷ್ ಇತರರು ಇದ್ದರು.