ಬಿ.ಶೇಖರ್ ಗೋಪಿನಾಥಂ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ಗಜಪಡೆಯ ಕ್ಯಾಪ್ಟನ್ ‘ಅಭಿಮನ್ಯು’ ಆನೆಯು ಸತತ 5ನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಲಕ್ಷಾಂತರ ಜನರ ನಡುವೆ ಗಜಗಾಂಭೀರ್ಯದ ಹೆಜ್ಜೆ ಹಾಕಿತು.
ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆಯು ಸತತ 5ನೇ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿ ಹೊರುವ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸಿತು. ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ದೂರವನ್ನು ನಿರಾಸದಾಯಕವಾಗಿ ಅಂಬಾರಿ ಹೊತ್ತು ಸಾಗುವ ಮೂಲಕ ತನ್ನ ಭುಜಬಲದ ಪರಾಕ್ರಮವನ್ನು ಮತ್ತೊಮ್ಮೆ ಸಾಬೀತುಪಡಿಸಿತು.ಕಳೆದ 25 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ 58 ವರ್ಷದ ಅಭಿಮನ್ಯು ಆನೆಗೆ 2020ನೇ ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರುವ ಅವಕಾಶ ಲಭಿಸಿತು. ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ಆನೆಯು 2021ರಲ್ಲೂ ಅಂಬಾರಿ ಹೊತ್ತು ಸೈ ಎನಿಸಿಕೊಂಡಿತು. ಕೊರೋನಾ ಕಾರಣಕ್ಕಾಗಿ 2020 ಮತ್ತು 2021ನೇ ಸಾಲಿನಲ್ಲಿ ಮೈಸೂರು ಅರಮನೆ ಆವರಣದಲ್ಲಿ 500 ಮೀಟರ್ ಅಷ್ಟೇ ಅಂಬಾರಿ ಹೊತ್ತಿತ್ತು.
ವಿಜಯದಶಮಿ ಮೆರವಣಿಗೆಯಲ್ಲಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಇರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತಂದ ಅಭಿಮನ್ಯು ಆನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪುಷ್ಪಾರ್ಚನೆ ಮಾಡಿಸಿಕೊಂಡಿತು. ನಂತರ ಕುಮ್ಕಿ ಆನೆಗಳಾದ ಲಕ್ಷ್ಮಿ ಮತ್ತು ಹಿರಣ್ಯಾ ಜೊತೆಗೆ ರಾಜಮಾರ್ಗದಲ್ಲಿ ಲಕ್ಷಾಂತರ ಜನರ ನಡುವೆ ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಾ ಸಾಗಿತು.
ದಸರಾ ಜಂಬೂಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿದ್ದ ಅಭಿಮನ್ಯು ಆನೆಯು ನಂತರ ನೌಫತ್ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಅಲ್ಲದೆ, ಶ್ರೀರಂಗಪಟ್ಟಣ ದಸರೆಯಲ್ಲಿ ಮರದ ಅಂಬಾರಿಯನ್ನು 7- 8 ವರ್ಷ ಹೊತ್ತಿರುವ ಅನುಭವ ಹೊಂದಿತ್ತು. ಈಗ 5ನೇ ಬಾರಿ ಅಭಿಮನ್ಯು ಆನೆಯು ಅಂಬಾರಿ ಹೊರುವಲ್ಲಿ ಯಶಸ್ವಿಯಾಯಿತು.
ಅಂಬಾರಿ ಆನೆಗಳು:
ನಗುಮುಖದ ಮಾವುತ ವಸಂತ...
ಚಾಮುಂಡೇಶ್ವರಿದೇವಿಯ ಉತ್ಸವ ಮೂರ್ತಿಯುಳ್ಳ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಆನೆಯು ಗಂಭೀರವಾಗಿ ಸಾಗುತ್ತಿದ್ದರು, ಅದರ ಮೇಲೆ ಸಾರಥಿ ಸ್ಥಾನದಲ್ಲಿದ್ದ ಮಾವುತ ವಸಂತ, ನಗುಮುಖದಿಂದಲೇ ಜನರತ್ತ ಕೈಬೀಸುತ್ತಾ ಸರಾಗಾವಾಗಿ ಅಭಿಮನ್ಯುನನ್ನು ಮುನ್ನಡೆಸುತ್ತಾ ಸಾಗಿದರು.