ನರೇಗಲ್ಲ: ಹಾಲಕೆರೆಯ ಶ್ರೀಅನ್ನದಾನೇಶ್ವರ ಮಠದ ಗುರು ಪರಂಪರೆಯನ್ನು ವೀಕ್ಷಿಸುತ್ತ ಬಂದರೆ ಈ ಮಠದ ಅಧಿಕಾರವನ್ನು ವಹಿಸಿಕೊಂಡ ಎಲ್ಲ ಶ್ರೀಗಳವರೂ ಮಠದ ಏಳಿಗೆಗಾಗಿಯೆ ತಮ್ಮ ಜೀವನವನ್ನು ಸವೆಸಿರುವುದು ಸ್ಪಷ್ಟವಾಗಿದೆ. ಅದರಲ್ಲೂ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂ.ಡಾ. ಅಭಿನವ ಅನ್ನದಾನ ಸ್ವಾಮಿಗಳು ದೂರದೃಷ್ಟಿಯುಳ್ಳ ಸ್ವಾಮಿಗಳಾಗಿದ್ದರು. ಅವರಿಂದಲೆ ನರೇಗಲ್ಲದಲ್ಲಿ ಶೈಕ್ಷಣಿಕ ಕ್ರಾಂತಿ ಜರುಗಲು ಕಾರಣವಾಯಿತು ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸಮೀಪದ ಹಾಲಕೆರೆಯಲ್ಲಿ ಹಿರಿಯ ಅನ್ನದಾನ ಸ್ವಾಮಿಗಳವರ ೧೧೧ನೇ ಪುಣ್ಯ ಸ್ಮರಣೋತ್ಸವ ಮತ್ತು ಕಾಯಕಯೋಗಿ ಲಿಂ.ಡಾ. ಅಭಿನವ ಅನ್ನದಾನ ಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೋತ್ಸವದ ನಿಮಿತ್ತ ನಡೆದ ಅಕ್ಷರ ಜಾತ್ರಾ ಮಹೋತ್ಸವದಲ್ಲಿ ಶ್ರೀಅನ್ನದಾನೇಶ್ವರ ನಗರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಒಂದು ವೇಳೆ ಶ್ರೀಗುರು ಅನ್ನದಾನ ಸ್ವಾಮಿಗಳು ನರೇಗಲ್ಲದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ ಅನ್ನದಾನದೊಂದಿಗೆ, ಜ್ಞಾನ ದಾಸೋಹವನ್ನೂ ನೀಡದಿದ್ದರೆ ಲಕ್ಷಾಂತರ ಜನರ ಬದುಕು ಏನಾಗಿರುತ್ತಿತ್ತು ಎಂಬುದನ್ನು ನಾವೆಲ್ಲರೂ ಯೋಚನೆ ಮಾಡಬೇಕು.
ಅಭಿನವ ಅನ್ನದಾನ ಸ್ವಾಮಿಗಳವರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಕಲು ರಹಿತ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಂತಿಕೆಯನ್ನು ಬೆಳೆಸಲು ಕಾರಣರಾದರು. ಅದಕ್ಕಾಗಿ ಸಮಾಜ ಎಂದಿಗೂ ಅವರಿಗೆ ಋಣಿಯಾಗಿರಬೇಕು ಎಂದರು.ನರೇಗಲ್ಲ ಎಸ್.ಎ.ವಿ.ವಿ.ಪಿ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಎಲ್ಲ ಶಾಲೆ ಕಾಲೇಜುಗಳಲ್ಲಿ ಗುಣ ಮಟ್ಟದ ಶಿಕ್ಷಣ ದೊರೆಯುತ್ತಿದ್ದು, ನರೇಗಲ್ಲದ ಕೀರ್ತಿ ದಶದಿಕ್ಕುಗಳಲ್ಲಿ ಪಸರಿಸಿದೆ. ಇದಕ್ಕೆ ಡಾ. ಅಭಿನವ ಅನ್ನದಾನ ಸ್ವಾಮಿಗಳ ದೂರದೃಷ್ಟಿಯೆ ಕಾರಣ ಎಂದು ಹೇಳಿದರು.
ವೇದಿಕೆಯ ಮೇಲೆ ನಾಡಿನ ಅನೇಕ ಹರಗುರು ಚರ ಮೂರ್ತಿಗಳು, ಸಾನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮಿಗಳು, ಗದಗ ಶ್ರೀರಾಮಕೃಷ್ಣಾಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು, ರಾಜ್ಯಸಭೆಯ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ, ಬಾಗಲಕೋಟೆ ಬಸವೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವೀರಣ್ಣ ಚರಂತಿಮಠ, ವಿಪ ಸದಸ್ಯ ಎಸ್.ವಿ. ಸಂಕನೂರ, ಬಳೂಟಗಿ, ಎಸ್.ಎ.ವಿ.ವಿ.ಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕ ಎಂ.ವಿ.ವೀರಾಪೂರ ನಿರೂಪಿಸಿದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಸ್ವಾಗತಿಸಿದರು. ಉಪನ್ಯಾಸಕ ಕಲ್ಲಯ್ಯ ಹಿರೇಮಠ ವಂದಿಸಿದರು.