ಸಾಹಿತ್ಯ ಕ್ಷೇತ್ರದಲ್ಲಿ ಚಿತ್ರ ಸಾಹಿತಿಗಳ ಕಡೆಗಣನೆ:ನಾ. ನಾಗಚಂದ್ರ

KannadaprabhaNewsNetwork | Published : Mar 3, 2024 1:31 AM

ಸಾರಾಂಶ

ಮೊದಲೆಲ್ಲಾ ಸಾಹಿತ್ಯ ರಚಿಸಿದ ನಂತರ ರಾಗ ಸಂಯೋಜಿಸಲಾಗುತ್ತಿತ್ತು. ಈಗ ರಾಗ ಸಂಯೋಜಿಸಿದ ನಂತರ ಸಾಹಿತ್ಯ ರಚಿಸಬೇಕಾಗಿ ಬಂದಿದೆ. ಪಾಶ್ಚಾತ್ಯ ಸಂಗೀತದ ಅಬ್ಬರದಲ್ಲಿ ಚಿತ್ರ ಸಾಹಿತ್ಯ ಏನು? ಎಂಬುದೇ ಗೊತ್ತಾಗುವುದಿಲ್ಲ

--2 ಎಂವೈಎಸ್ 32

ಅಭಿರುಚಿ ಬಳಗವು ಕೃಷ್ಣಮೂರ್ತಿಪುರಂ ನಮನ ಕಲಾಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಕಲಾನಮನ ಕಾರ್ಯಕ್ರಮವನ್ನು ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಉದ್ಘಾಟಿಸಿದರು. ರಂಗಕರ್ಮಿಗಳಾದ ನಾ. ನಾಗಚಂದ್ರ, ಸಿ.ವಿ. ಶ್ರೀಧರಮೂರ್ತಿ, ಸ್ನೇಹಸಿಂಚನ ಸಂಸ್ಥೆ ಅಧ್ಯಕ್ಷೆ ಮ.ನ. ಲತಾ ಮೋಹನ್, ಎನ್.ವಿ. ರಮೇಶ್ , ಯಶವಂತಕುಮಾರ್ , ಛಾಯಾ ಇದ್ದಾರೆ.

-----

ಕನ್ನಡಪ್ರಭ ವಾರ್ತೆ ಮೈಸೂರು

ಸಾಹಿತ್ಯ ಕ್ಷೇತ್ರದಲ್ಲಿ ಚಿತ್ರ ಸಾಹಿತಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಹಿರಿಯ ರಂಗಕರ್ಮಿ ನಾ. ನಾಗಚಂದ್ರ ವಿಷಾದಿಸಿದರು.

ಅಭಿರುಚಿ ಬಳಗವು, ಗಾನಸಿರಿ ವೃಂದ ಸಹಯೋಗದಲ್ಲಿ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಕಲಾನಮನ- ಸೋರಟ್ ಅಶ್ವತ್ಥ್, ಜ್ಯೋತಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸೋರಟ್ ಅಶ್ವತ್ಥ್, ಹುಣಸೂರು ಕೃಷ್ಣಮೂರ್ತಿ, ಯೋಗಾನರಸಿಂಹ, ಲಕ್ಷ್ಮೀನಾರಾಯಣ ಭಟ್ಚ, ದೊಡ್ಡರಂಗೇಗೌಡ ಮೊದಲಾದವರನ್ನು ಗಮನಸಿದಾಗ ಇದು ವೇದ್ಯವಾಗುತ್ತದೆ ಎಂದರು.

ಮೊದಲೆಲ್ಲಾ ಸಾಹಿತ್ಯ ರಚಿಸಿದ ನಂತರ ರಾಗ ಸಂಯೋಜಿಸಲಾಗುತ್ತಿತ್ತು. ಈಗ ರಾಗ ಸಂಯೋಜಿಸಿದ ನಂತರ ಸಾಹಿತ್ಯ ರಚಿಸಬೇಕಾಗಿ ಬಂದಿದೆ. ಪಾಶ್ಚಾತ್ಯ ಸಂಗೀತದ ಅಬ್ಬರದಲ್ಲಿ ಚಿತ್ರ ಸಾಹಿತ್ಯ ಏನು? ಎಂಬುದೇ ಗೊತ್ತಾಗುವುದಿಲ್ಲ ಎಂದು ಅವರು ಹೇಳಿದರು.

ವೃತ್ತಿ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ಸೋರಟ್ ಅಶ್ವತ್ಥ್ ಅವರ ಕೊಡುಗೆ ಅಪಾರ. ಆದರೆ ಅವರಿಗೆ ಸಲ್ಲಬೇಕಾದ ಗೌರವ ಸಿಗಲಿಲ್ಲ ಎಂದರು.

ಮತ್ತೊಬ್ಬ ಹಿರಿಯ ರಂಗಕರ್ಮಿ ಸಿ.ವಿ. ಶ್ರೀಧರಮೂರ್ತಿ ಮಾತನಾಡಿ, ಒಂದು ಕಾಲಕ್ಕೆ ಮೈಸೂರಿನ ರಾಮಾನುಜ ರಸ್ತೆಯಲ್ಲಿ ಸೋರಟ್ ಅಶ್ವತ್ಥ್, ರತ್ನಾಕರ್, ಚೇತನ್ ರಾಮರಾವ್, ಪಕ್ಕದ ಚಾಮುಂಡಿಪುರಂನಲ್ಲಿ ವಿಷ್ಣುವರ್ಧನ್ ಅವರ ತಂದೆ, ಸರಸ್ವತಿಪುರಂನಲ್ಲಿ ಕೆ.ಎಸ್. ಅಶ್ವತ್ಥ್, ಪಂಚವಟಿಯಲ್ಲಿ ಎಂ.ಪಿ. ಶಂಕರ್- ಹೀಗೆ ಚಿತ್ರರಂಗದ ಹಲವಾರು ಗಣ್ಯರು ನೆಲೆಸಿದ್ದರು ಎಂದು ಸ್ಮರಿಸಿದರು.

ಕುಣಿಗಲ್ ಪ್ರಭಾಕರ ಶಾಸ್ತ್ರಿ. ಕು.ರಾ. ಸೀತಾರಾಮ ಶಾಸ್ತ್ರಿ. ಆರ್.ಎನ್. ಜಯಗೋಪಾಲ್ ಮೊದಲಾದವರ ಬಗ್ಗೆ ಸರಿಯಾಗಿ ವಿಮರ್ಶೆಯೇ ನಡೆಯಲಿಲ್ಲ. ಕೆಲ ಸಮಯದ ನಂತರ ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ಸ್ವಲ್ಪ ವಿಮರ್ಶೆಯಾಯಿತು ಎಂದ್ ಅವರು ಹೇಳಿದರು.

ಸೋರಟ್ ಅಶ್ವತ್ಥ್ ಹಾಗೂ ಜ್ಯೋತಿ ಅವರ ಬಗ್ಗೆ ಆಕಾಶವಾಣಿ ನಿವೃತ್ತ ಕಾರ್ಯಕ್ರಮಾಧಿಕಾರಿ ಏನ್.ವಿ. ರಮೇಶ್ ಉಪನ್ಯಾಸ ನೀಡಿದರು.

ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ನೇಹ ಸಿಂಚನ ಸಂಸ್ಥೆಯ ಅಧ್ಯಕ್ಷೆ ಮ.ನ. ಲತಾ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಉಮಾ ರಮೇಶ್, ರಾಘವೇಂದ್ರ ರತ್ನಾಕರ ಇದ್ದರು. ಪರಮೇಶ ಕೆ.ಉತ್ತನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಛಾಯಾ ಯಶವಂತ್ ಹಾಗೂ ಪ್ರಮೋದ್ ಶರ್ಮ ನೆನಪುಗಳನ್ನು ಹಂಚಿಕೊಂಡರು. ಯಶವಂತ್ ಹಾಗೂ ತಂಡ, ಸಾಂಬಮೂರ್ತಿ, ರಾಜೇಂದ್ರಪ್ರಸಾದ್ ಗೀತಗಾಯನ ನಡೆಸಿಕೊಟ್ಟರು.

Share this article