ಕೆಆರ್ ಪೇಟೆ ತಾಲೂಕಿನ ಕಲ್ಲಹಳ್ಳಿಯ ಪ್ರಸಿದ್ಧ ಭೂ ವರಾಹನಾಥ ದೇವಾಲಯ । ಸ್ವಾಮಿಗೆ ರೇವತಿ ನಕ್ಷತ್ರದ ಅಭಿಷೇಕ ಮತ್ತು ಕಲ್ಯಾಣೋತ್ಸವ
ತಾಲೂಕಿನ ಕಲ್ಲಹಳ್ಳಿಯ ಪ್ರಸಿದ್ದ ಭೂ ವರಾಹನಾಥ ದೇವಾಲಯದಲ್ಲಿ ಡಿ.21 ರಂದು ಭೂ ದೇವಿ ಸಮೇತನಾಗಿರುವ ಭೂ ವರಾಹನಾಥನಿಗೆ ರೇವತಿ ನಕ್ಷತ್ರದ ಅಭಿಷೇಕ ಮತ್ತು ಕಲ್ಯಾಣೋತ್ಸವ ಹಾಗೂ ವಿಶೇಷ ಪೂಜಾ ಮಹೋತ್ಸವ ನಡೆಯಲಿವೆ.
ಗಂಜೀಗೆರೆ ಗ್ರಾಪಂ ವ್ಯಾಪ್ತಿಯ ಭೂ ವರಹನಾಥ ಸ್ವಾಮಿಗೆ ಬೆಳಗ್ಗೆ 9 ಗಂಟೆಗೆ ರೇವತಿ ನಕ್ಷತ್ರದ ಅಭಿಷೇಕ ನಡೆದರೆ, 11.30ಕ್ಕೆ ಕಲ್ಯಾಣೋತ್ಸವ ನೆರವೇರಲಿದೆ.ಪ್ರತಿ ತಿಂಗಳು ರೇವತಿ ನಕ್ಷತ್ರದ ವಿಶೇಷ ದಿನ ಭೂವರಹನಾಥ ಪ್ರತಿಷ್ಠಾಪನ ಮೂರ್ತಿಗೆ ಒಂದು ಸಾವಿರ ಲೀಟರ್ ಹಾಲು, 500 ಲೀಟರ್ ಕಬ್ಬಿನ ಹಾಲು, 500 ಲೀಟರ್ ಎಳನೀರು, ಜೇನುತುಪ್ಪ, ಹಸುವಿನ ತುಪ್ಪ, ಪವಿತ್ರ ಗಂಗಾಜಲ, ಶ್ರೀ ಗಂಧ ಸೇರಿದಂತೆ ಐವತ್ತೆಂಟು ಬಗೆಯ ವಿಶೇಷ ವಸ್ತುಗಳಿಂದ ಅಭಿಷೇಕ, ಮಲ್ಲಿಗೆ, ಪಾಜೆ, ಸಂಪಿಗೆ, ಗುಲಾಬಿ, ತುಳಸಿ, ಜವನ, ಪವಿತ್ರ ಪತ್ರಗಳು, ಕಮಲದ ಹೂವು ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ಪುಷ್ಪಾರ್ಚನೆ ನಡೆಯಲಿದೆ.
ಶ್ರೀ ಕ್ಷೇತ್ರ ತಿರುಪತಿ ಮಾದರಿ ಅಭಿವೃದ್ಧಿ:
ಸುಮಾರು 18 ಅಡಿ ಎತ್ತರದ ಭೂ ದೇವಿ ಸಮೇತನಾದ ವರಾಹನಾಥನ ಕೃಷ್ಣ ಶಿಲೆಯ ಸುಂದರ ವಿಗ್ರಹ ಕರ್ನಾಟದಲ್ಲಿಯೇ ಅತಿ ವಿಶಿಷ್ಠವಾದುದು. ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣದ ಅನಂತರ ವರಾಹನಾಥ ಕಲ್ಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಮುಳುಗಡೆಯಾಗಿ ಹಲವು ವರ್ಷ ಈ ಕ್ಷೇತ್ರ ಅನಾಥವಾಗಿ ನೇಪತ್ಯಕ್ಕೆ ಸರಿದಿತ್ತು.
ನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಬರುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ಪ್ರಸಾದ ದಾಸೋಹ ನಡೆಸಲಾಗುತ್ತಿದೆ. ಸ್ವಂತ ಮನೆ ಕಟ್ಟ ಬಯಸುವ ಭಕ್ತರು ಇಲ್ಲಿ ಪೂಜೆ ಮಾಡಿಸಿದ ಇಟ್ಟಿಗೆ ಮತ್ತು ದೇವಾಲಯದ ಆವರಣದಲ್ಲಿನ ಒಂದು ಹಿಡಿ ಮಣ್ಣನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಪೂಜಿಸಿದರೆ ಮನೆ ಕಟ್ಟುವ ಕಾರ್ಯ ಸುಗಮವಾಗಿ ನಡೆಯುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.
ತಿರುಪತಿ ತಿಮ್ಮಪ್ಪ, ಕಾಶಿ ವಿಶ್ವನಾಥ, ಶಬರಿಮಲೆ ಅಯ್ಯಪ್ಪ, ಮಲೆ ಮಹದೇಶ್ವರ ದೇವಾಲಯಗಳ ಮಾದರಿಯಲ್ಲಿ ಇದನ್ನು ಭಕ್ತರ ತೀರ್ಥ ಕ್ಷೇತ್ರವನ್ನಾಗಿ ರೂಪಿಸುವಲ್ಲಿ ಪರಕಾಲ ಮಠ ನಿರತವಾಗಿದೆ.
17ಕೆಎಂಎನ್ ಡಿ17