- ಎಸ್‌ಡಬ್ಲೂಆರ್ ಮಜದೂರ ಯೂನಿಯನ್‌ನಿಂದ ಡಿಸಿ ಕಚೇರಿ ಎದುರು ಪ್ರತಿಭಟನೆಕನ್ನಡಪ್ರಭ ವಾರ್ತೆ ಧಾರವಾಡ
ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿಯಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ಕೂಡಲೇ ಎನ್‌ಪಿಎಸ್ ರದ್ಧುಗೊಳಿಸಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಡಬ್ಲೂಆರ್ ಮಜದೂರ ಯೂನಿಯನ್‌ನಿಂದ ಧಾರವಾಡ ರೈಲ್ವೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಎಸ್‌ಡಬ್ಲೂಆರ್ ಮಜದೂರ ಯೂನಿಯನ್, ಜೆಎಫ್‌ಆರ್ ಒಪಿಎಸ್ ಮತ್ತು ಎಐಆರ್‌ಎಫ್ ಸಂಘಟನೆಗಳ ವತಿಯಿಂದ ಸಂಘಟನೆ ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಸ್ ಅವರ ಕರೆಯ ಮೇರೆಗೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಒಪಿಎಸ್ ಜಾರಿ ಆಗುವ ವರೆಗೆ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎನ್‌ಪಿಎಸ್ ಯೋಜನೆ ಜಾರಿ ಮಾಡಿರುವುದರಿಂದ ರೈಲ್ವೆ ಇಲಾಖೆ ಮಾತ್ರವಲ್ಲದೇ ಪ್ರತಿಯೊಂದು ಇಲಾಖೆ ನೌಕರರಿಗೆ ತೊಂದರೆ ಉಂಟಾಗಿದೆ. ಈಗಾಗಲೇ ವಿವಿಧ ಇಲಾಖೆಗಳ ಜೊತೆಗೂಡಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹ ಮಾಡಲಾಗಿದೆ. ಆದರೆ, ಆಳುವ ಸರ್ಕಾರಗಳು ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ. ಇದರಿಂದ ನೌಕರರಿಗೆ ಇತ್ತ ಕೆಲಸ ಮಾಡಲು ಕಷ್ಟಕರವಾಗುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಧಾರವಾಡ ಶಾಖಾ ಕಾರ್ಯದರ್ಶಿ ಎಲ್.ಎಸ್. ಚೌವ್ಹಾಣ ಮಾತನಾಡಿ, ಸೋಮವಾರದಿಂದ ನಾಲ್ಕು ದಿನಗಳ ವರೆಗೆ ಮುಂಜಾನೆ 9 ರಿಂದ ಸಂಜೆ 5ರ ವರೆಗೆ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಒಂದು ವೇಳೆ ಸರ್ಕಾರ ಇದಕ್ಕೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳ ಕರೆಯ ಮೇರೆಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಾಸುದೇವ ಕೆ., ಎಂ.ಎಂ. ಖಾಜಿ, ಶಕುಂತಲಾ ಜಿ., ನಾಗರತ್ನಾ, ಜಾಧವ, ಕೃಷ್ಣಾ ಕೆ., ಆರ್.ಎನ್. ಮತ್ತಿಕೊಪ್ಪ, ಧರ್ಮರಾಜ ಪಿ., ಎಂ. ಯಮುನಪ್ಪ, ಮಡಿವಾಳಪ್ಪ ಘೋಡಸೆ ಇದ್ದರು.