- ಪ್ರತಿಭಟನೆಯಲ್ಲಿ ಫೆಡರೇಷನ್ ಮುಖಂಡರ ಆಗ್ರಹ । ಅಂಗನವಾಡಿ ವ್ಯವಸ್ಥೆಗೆ ಧಕ್ಕೆ ತರದಂತೆ ಸರ್ಕಾರಕ್ಕೆ ತಾಕೀತು
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಅಂಗನವಾಡಿ ವ್ಯವಸ್ಥೆಗೆ ಧಕ್ಕೆ ತರುವಂತೆ ಆಯಾ ಶಾಲೆಗಳ ಎಸ್‌ಡಿಎಂಸಿಗಳ ಮೂಲಕವೇ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಹೊರಟಿರುವ ನಿರ್ಧಾರ ಕೈ ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್ ಜಿಲ್ಲಾ ಘಟಕ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.ನಗರದ ಎಸಿ ಕಚೇರಿ ಎದುರು ಸಂಘಟನೆ ಜಿಲ್ಲಾ, ತಾಲೂಕು ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ನೌಕರರು, ರಾಜ್ಯದಲ್ಲಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವುದನ್ನು ಕೈ ಬಿಡುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಸಂಘಟನೆ ಮುಖಂಡರು ಮಾತನಾಡಿ, 49 ವರ್ಷಗಳ ಹಿಂದೆ ಆರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ, ಬಾಣಂತಿ ಮತ್ತು 6 ತಿಂಗಳಿಂದ 6 ವರ್ಷ ವಯೋಮಾನದ ಮಕ್ಕಳಿಗೆ ಆರೋಗ್ಯ ಲಾಲನೆ, ಪಾಲನೆ, ಪೋಷಣೆ, ಕ್ರೀಡಾ ಕಲಿಕಾ ಚಟುವಟಿಕೆ ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಾ ಬರಲಾಗಿದೆ ಎಂದರು.ದೇಶದಲ್ಲಿ ಸುಮಾರು 29 ಲಕ್ಷಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಿವೆ. ರಾಜ್ಯದಲ್ಲಿ ಸುಮಾರು 70 ಸಾವಿರ ಅಂಗನವಾಡಿ ಕೇಂದ್ರಗಳು ಮಹಿಳೆಯರು, ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಈ ಕೇಂದ್ರಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಿ, ಅಂಗನವಾಡಿ ಕೇಂದ್ರದ ವ್ಯವಸ್ಥೆ ಉಳಿಸಬೇಕಾಗಿದೆ. 3 ವರ್ಷದಿಂದ 6 ವರ್ಷ ವಯೋಮಾನದ ಮಕ್ಕಳಾಗಿ ರೂಪುಗೊಂಡ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸೌಲಭ್ಯದಿಂದಾಗಿ ವಂಚಿತರಾಗುವ ಪರಿಸ್ಥಿತಿ ತರಬಾರದು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿ, ಅಂಗನವಾಡಿ ವ್ಯವಸ್ಥೆ ದುರ್ಬಲಗೊಳ್ಳುವ ಅಪಾಯ ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರ ನಿರ್ವಹಿಸುವ ಕೆಲಸವನ್ನು ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಒಂದೇ ವಯಸ್ಸಿನ ಮಕ್ಕಳಿಗೆ ಶಾಲೆ ತೆರೆಯುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿ, ಸರ್ಕಾರಿ ಹಣ ಪೋಲಾಗುತ್ತದೆ. ಈಗಾಗಲೇ ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಅಂಗನವಾಡಿಗಳನ್ನು ಶಾಲಾ ಪ್ರಾಂಗಣಕ್ಕೆ ಸೇರಿಸುವಂತೆ ಶಿಫಾರಸು ಸೇರಿದಂತೆ ಅದರಲ್ಲಿನ ನೂನ್ಯತೆ, ಜನವಿರೋಧಿ ಅಂಶ ಗುರುತಿಸಿ, ರಾಜ್ಯದಲ್ಲಿ ಎನ್‌ಇಪಿ ಜಾರಿಗೊಳಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕೆ ಪ್ರತಿಯಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿದೆ ಎಂದು ತಿಳಿಸಿದರು.ಮುಖಂಡರಾದ ಆವರಗೆರೆ ಎಚ್.ಜಿ.ಉಮೇಶ, ಆವರಗೆರೆ ಚಂದ್ರು, ಆವರಗೆರೆ ವಾಸು, ಸರ್ವಮ್ಮ, ಗೀತಾ, ಕೆ.ಸಿ.ನಿರ್ಮಲ, ಎಸ್.ಎಸ್.ಮಲ್ಲಮ್ಮ, ರೇಣುಕಾ, ಸುಧಾ. ಎಚ್.ಜಿ.ಮಂಜುಳಾ, ಎಸ್.ಎಸ್.ಮಲ್ಲಮ್ಮ, ಜಿ.ರೇಣುಕಾ. ಗಾಯತ್ರಿ ಜಾಧವ್ ಇತರರು ಇದ್ದರು.
- - -ಬಾಕ್ಸ್ ಬೇಡಿಕೆಗಳೇನು? - ರಾಜ್ಯ ಸರ್ಕಾರ ಎಸ್‌ಡಿಎಂಸಿ ಮೂಲಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವ ಪ್ರಕ್ರಿಯೆ ತಡೆಯಬೇಕು
- ಹೊಸದಾಗಿ ರೂಪಗೊಳ್ಳುವ ರಾಜ್ಯ ಶಿಕ್ಷಣ ನೀತಿಯ ಅಂಶಗಳನ್ನು ಪರಾಮರ್ಶಿಸಬೇಕು- ಅಂಗನವಾಡಿಗೆ ದಾಖಲಿಸುವ ಮಕ್ಕಳ ಹಾಗೂ ಶಾಲಾ ಪೂರ್ವ ತರಗತಿಗಳಿಗೆ ಸೇರ್ಪಡೆಗೊಳಿಸುವ ಮಕ್ಕಳ ವಯೋಮಾನ ನಿಗದಿಪಡಿಸಬೇಕು
- ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ದೃಢ ನಿಲುವು ತೆಗೆದುಕೊಳ್ಳಲಿ- ಅಂಗನವಾಡಿ ಫೆಡರೇಷನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಕಾರ್ಮಿಕ ಇಲಾಖೆಗಳ ಸಭೆ, ನಡೆಸಿ ಸಮಸ್ಯೆ ಪರಿಹರಿಸಬೇಕು
- - - -5ಕೆಡಿವಿಜಿ1:ದಾವಣಗೆರೆ ಎಸಿ ಕಚೇರಿ ಎದುರು ಬುಧವಾರ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ ನಡೆಯಿತು.