ವಕ್ಫ್‌ ಬೋರ್ಡ್‌ ವಿಶೇಷ ಅಧಿಕಾರ ರದ್ದು ಮಾಡಿ: ಕೋಡಿಹಳ್ಳಿ ಚಂದ್ರಶೇಖರ ಆಗ್ರಹ

KannadaprabhaNewsNetwork |  
Published : Nov 11, 2024, 11:47 PM IST
ಚಿತ್ರ 11ಬಿಡಿಆರ್57 | Kannada Prabha

ಸಾರಾಂಶ

ರೈತರ ಪಹಣಿಯಲ್ಲಿನ ವಕ್ಫ್ ಮಂಡಳಿ ಎಂದು ನಮೂದು ಮಾಡಿರುವ ಹೆಸರುಗಳು ಕೂಡಲೆ ತೆಗೆಯಬೇಕೆಂದು ಆಗ್ರಹಿಸಿ ಬೀದರ್‌ನಲ್ಲಿ ರೈತ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಈ ಹಿಂದೆ ವಕ್ಫ್‌ ಬೋರ್ಡಗೆ ನೀಡಿದ್ದ ವಿಶೇಷ ಅಧಿಕಾರ ರದ್ದು ಮಾಡಿ ಇಲ್ಲದಿದ್ದರೆ. ರಾಜ್ಯದಲ್ಲಿ ರೈತರ ದೊಡ್ಡ ಕ್ರಾಂತಿಯಾಗುತ್ತೆ‌ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೀದರ್ನಲ್ಲಿ ರೈತ ಸಂಘದಿಂದ ಹಮ್ಮಿಕೊಂಡಿದ್ದ ಪಹಣಿಯಲ್ಲಿನ ವಕ್ಫ್ ಮಂಡಳಿ ಎಂದು ನಮೂದು ಮಾಡಿರುವ ಹೆಸರುಗಳು ಕೂಡಲೇ ತೆಗೆಯಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ಆಯೋಜಿಸಿದ ರೈತರ ಪ್ರತಿಭಟನೆಯಲ್ಲಿ ಮಾತನಾಡಿ, ಇದೇ 15 ರಂದು ಕಾವೇರಿಗೆ ರೈತ ಮುಖಂಡರು ಬರುತ್ತೇವೆ. ಅಂದು ಅಧಿಕಾರಿಗಳು ರೈತರ ಜಮೀನುಗಳನ್ನ ವಾಪಸ್ ಕೊಟ್ಟರೆ ಸರಿ ಇಲ್ಲವಾದರೆ ವಕ್ಪ್‌ಗೆ ಸೇರಿದ ಜಮೀನುಗಳನ್ನು ನಾವೇ ಸ್ವಾಧೀನ ಪಡೆದುಕೊಳ್ಳುತ್ತೇವೆ ಎಂದರು.

ನೀವು ವಕ್ಫ್‌ ಹೆಸರಿನಲ್ಲಿ ಗೂಂಡಾಗಿರಿ ಮಾಡಿ ವಕ್ಫ್‌ ಟ್ರಸ್ಟ್ ಗೆ ನಮ್ಮ ಜಮೀನು ಸೆರಿಸಿದ್ದಿರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕ್ಫ್‌ ನೋಟಿಸ್‌ಗಳನ್ನು ವಾಪಸ್ ಪಡೆಯಿರಿ ಎಂದು ಹೇಳಿದ್ದಾರೆ. ಆದರೆ ಅದು ಎಲ್ಲೆಲ್ಲಿ ಗೊಂದಲ ಇದೆ. ಅಲ್ಲಿ ಮಾತ್ರ ವಾಪಸ್‌ಗೆ ನಿರ್ದೇಶನ ಕೊಟ್ಟಂತ್ತಿದೆ. ವಕ್ಫ್‌ಗೆ ಸೇರಿಸಿದ ಎಲ್ಲ ಜಮಿನು ನೀವು ರದ್ದು ಮಾಡಬೇಕೆಂದರು.

ಇದಕ್ಕೂ ಮುನ್ನ ತಡೋಳಾ ಮಠದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಮಾನವೀಯತೆಯ ನೆಲೆಯಲ್ಲಿ ನಿಜಾಮ್ ಆಡಳಿತದ ವೇಳೆ ನೀಡಲಾಗಿದ್ದ ಇನಾಮಿ ಜಮೀನುಗಳನ್ನು ವಕ್ಫ್ ಹೆಸರಿನಲ್ಲಿ ಕಬಳಿಸಲು ಯತ್ನಿಸುತ್ತಿದೆ. ರೈತರಿಗೆ ಇವು ಕೆಟ್ಟ ದಿನಗಳು, ಮಾಡು ಇಲ್ಲವೇ ಮಡಿ ಹೋರಾಟ. ನಮ್ಮ ಮಠದ ಮೇಲೂ ವಕ್ಫ್ ಮಂಡಳಿಯ ವಕ್ರದೃಷ್ಟಿ ಬಿದ್ದಿದೆ ಎಂದರು.

ಬಸವಕಲ್ಯಾಣದ ಮೂಲ ಅನುಭವ ಮಂಟಪ (ಈಗಿರುವ ಪೀರ ಪಾಷಾ ದರ್ಗಾ) ಸಹ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಹೀಗಾಗಿ ರೈತರು ಸಂಘರ್ಷಕ್ಕೆ ಇಳಿಯುವ ಮುನ್ನ ಸರ್ಕಾರ ಕೂಡಲೇ ಎಚ್ಚೆತ್ತು ಆಗಿರುವ ಲೋಪ ಸರಿಪಡಿಸಬೇಕೆಂದರು.

ಈ ಸಂದರ್ಭದಲ್ಲಿ ಡಾ. ಚಂದ್ರಶೇಖರ ಶಿವಾಚಾರ್ಯರು ಬೇಮಳಖೇಡ, ಹೊನ್ನಲಿಂಗ ಮಹಾಸ್ವಾಮಿ, ಸಿಂದನಕೇರಾ, ಸಿದ್ದಲಿಂಗ ಸ್ವಾಮಿ ಠಾಣಾಕುಶನೂರ, ಗಂಗಾಧರ ಶಿವಾಚಾರ್ಯ ಲಾಡಗೇರಿ, ಶಿವಶಂಕರ ಶಿವಾಚಾರ್ಯ ಯದಲಾಪೂರ, ಬಸವಾನಂದ ಸ್ವಾಮಿ ಖಟಕಚಿಂಚೋಳಿ, ಬಿಜೆಪಿ ಮುಖಂಡ ಈಶ್ವರಸಿಂಗ್‌ ಠಾಕೂರ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ರಾಜ್ಯ ಪ್ರತಿನಿಧಿ ಚಂದ್ರಶೇಖರ ಜಮಖಂಡಿ, ಸುಭಾಷ ರಗಟೆ, ಶಂಕರೆಪ್ಪಾ ಪಾರಾ, ನಾಗಯ್ಯ ಸ್ವಾಮಿ, ಪ್ರವೀಣ ಕುಲಕರ್ಣಿ, ಬಾಬುರಾವ ಜೋಳದಾಬಕೆ ಸತೀಶ ನನ್ನೂರೆ, ಪ್ರಕಾಶ ಬಾವಗೆ, ಭಾಗ್ಯಶ್ರೀ ದೇಶಮುಖ, ಮಹೇಶ್ವರ ಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಪ್ರತಿಭಟನಾ ಮೆರವಣಿಗೆ ನಡೆಸಿ, ಸಿಎಂಗೆ ಪತ್ರ

ನಗರದ ಗಣೇಶ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಜಿಲ್ಲೆಯ ರೈತರ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರುಗಳು ನಮೂದು ಮಾಡಿ, ತಾವು ರೈತ ವಿರೋಧಿ ಎಂದು ಸಾಬೀತು ಮಾಡಿದ್ದೀರಿ. ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿರುವ ರೈತರಿಗೆ ಗೊತ್ತಾದಾಗಿನಿಂದ ರೈತರು ಚಿಂತೆಗೀಡಾಗಿ ಅವರ ನಿದ್ದೆಗೆಟ್ಟಿದೆ. ಕೂಡಲೇ ರೈತರ ಪಹಣಿಯಲ್ಲಿನ ವಕ್ಫ್ ಬೋರ್ಡ್ ಎಂದು ನಮೂದು ಮಾಡಿರುವ ಹೆಸರು ತೆಗೆಯಬೇಕು. ಇಲ್ಲದಿದ್ದಲ್ಲಿ ನಿರಂತರವಾಗಿ ಹೋರಾಟಗಳು ನಡೆಯಲಿವೆ. ಮುಂದಿನ ಆಗು ಹೋಗುಗಳಿಗೆ ತಾವೇ ಜವಾಬ್ದಾರರು ಎಂದು ಮುಖ್ಯಮಂತ್ರಿಗೆ ಬರೆದ ಮನವಿಯಲ್ಲಿ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ