ಕನ್ನಡಪ್ರಭ ವಾರ್ತೆ ಬೆಂಗಳೂರು
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀಕ್ಷಕರಾಗಿದ್ದ ಟಿ.ಡಿ. ತಿಮ್ಮಪ್ಪರನ್ನು ಅದೇ ಸಂಸ್ಥೆಯ ಇನ್‌ಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ವಿಭಾಗದ ಪ್ರಭಾರ ಮುಖ್ಯಸ್ಥರಾಗಿ (ಎಚ್‌ಒಡಿ) ನೇಮಕ ಮಾಡಿರುವುದನ್ನು ಹೈಕೋರ್ಟ್ ರದ್ದುಪಡಿಸಿದೆ.ಸ್ವಾಯತ್ತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರನ್ನು ಅದೇ ಸಂಸ್ಥೆಗೆ ಸೇರಿದ ಆಸ್ಪತ್ರೆಯ ಒಂದು ವಿಭಾಗದ ಮುಖ್ಯಸ್ಥರಾಗಿ ಹೆಚ್ಚುವರಿ ಹೊಣೆ ನೀಡುವಂತಿಲ್ಲ ಎಂದು ಆದೇಶಿಸಿದೆ.
ಟಿ.ಡಿ. ತಿಮ್ಮಪ್ಪರನ್ನು ಇನ್‌ಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ವಿಭಾಗದ ಪ್ರಭಾರ ಮುಖ್ಯಸ್ಥರಾಗಿ ನೇಮಕ ಮಾಡಿದ ಕ್ರಮ ಪ್ರಶ್ನಿಸಿ ಡಾ.ಎಸ್. ಶ್ರೀಧರ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಈ ಆದೇಶ ಮಾಡಿದ್ದಾರೆ.ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮಗಳ ನಿಯಮ 3.7ರ ಪ್ರಕಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರನ್ನು ಸಂಸ್ಥೆಯ ಮತ್ತೊಂದು ವಿಭಾಗದ ಮುಖ್ಯಸ್ಥರಾಗಿ ಹೆಚ್ಚುವರಿ ಹೊಣೆಗಾರಿಕೆಗಳ ನಿರ್ವಹಿಸುವಂತಿಲ್ಲ. ಹಾಗಾಗಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾಗಿರುವ ಟಿ.ಡಿ. ತಿಮ್ಮಪ್ಪರನ್ನು ಇನ್‌ಎಟಿ ವಿಭಾಗದ ಮುಖ್ಯಸ್ಥರಾಗಿ ನೇಮಿಸಿರುವುದು ಎನ್‌ಎಂಸಿ ನಿಯಮಗಳ ಉಲ್ಲಂಘನೆ ಮತ್ತು ಕಾನೂನು ಬಾಹಿರ ಕ್ರಮವಾಗಿದೆ ಎಂದು ಪೀಠ ತಿಳಿಸಿದೆ.
ವೈದ್ಯಕೀಯ ಅಧೀಕ್ಷಕರಾಗಿ ಆಸ್ಪತ್ರೆಯ ಆಡಳಿತಾತ್ಮಕ ಕೆಲಸದ ಜತೆಗೆ ಬಜೆಟ್, ಸಿಬ್ಬಂದಿ, ಸೌಕರ್ಯಗಳು ಸೇರಿ ಒಟ್ಟಾರೆ ಆಸ್ಪತ್ರೆಯ ಕೆಲಸ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ. ಅಂತಹವರಿಗೆ ಇಎನ್‌ಟಿ ವಿಭಾಗದ ಹೆಚ್ಚುವರಿ ಹೊಣೆ ವಹಿಸಿದರೆ ಸರ್ಜರಿ, ವೈದ್ಯಕೀಯ ಚಿಕಿತ್ಸೆ ಸೇರಿ ಹಲವು ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಎರಡೂ ಹುದ್ದೆ ಒಬ್ಬರೇ ಸಮರ್ಪಕವಾಗಿ ನಿರ್ವಹಿಸಲಾಗದು. ಹಾಗಾಗಿ, ತಿಮ್ಮಪ್ಪ ಅವರನ್ನು ಇಎನ್‌ಟಿ ವಿಭಾಗದ ಮುಖ್ಯಸ್ಥರಾಗಿ ನೇಮಿಸಿ 2024ರ ಜ.31ರಂದು ಸಂಸ್ಥೆಯ ನಿರ್ದೇಶಕರು ಹೊರಡಿಸಿದ ಜ್ಞಾಪಕ ಪತ್ರ (ಮೆಮೊರಂಡಮ್) ರದ್ದುಪಡಿಸುತ್ತಿರುವುದಾಗಿ ನ್ಯಾಯಪೀಠ ಆದೇಶದಲ್ಲಿ ಹೇಳಿದೆ.ಹಾಗೆಯೇ, ಪರಿಣಿತ ಹಾಗೂ ಸೂಕ್ತ ಅನುಭವ ಹೊಂದಿರುವ ಅರ್ಹರನ್ನು ಸಂಸ್ಥೆಯ ಇನ್‌ಎಟಿ ಮುಖ್ಯಸ್ಥರಾಗಿ ನೇಮಕ ಮಾಡಬೇಕು.ಆಡಳಿತಾತ್ಮಕ ಮತ್ತು ಕ್ಲಿನಿಕಲ್ ಪಾತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕರಿಗೆ ಹೈಕೋರ್ಟ್ ಸೂಚಿಸಿದೆ.ಪ್ರಕರಣದ ಹಿನ್ನೆಲೆ
ತಿಮ್ಮಪ್ಪ ಅವರು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ವೈದ್ಯಕೀಯ ಅಧೀಕ್ಷರಾಗಿದ್ದಾರೆ. ಅವರನ್ನು ಇಎನ್ ಟಿ ವಿಭಾಗದ ಮುಖ್ಯಸ್ಥರಾಗಿ (ಎಚ್‌ಒಡಿ) ಹೊಣೆ ನೀಡಿರುವುದು ಎಂಎನ್‌ಸಿ ನಿಯಮ 3.7ರ ಉಲ್ಲಂಘನೆ. ಜವಾಬ್ದಾರಿಯುತ ಹುದ್ದೆಗಳಲ್ಲಿ ಒಬ್ಬರನ್ನೇ ನೇಮಿಸಿರುವುದರಿಂದ ಸಂಘರ್ಷ ಹಿತಾಸಕ್ತಿಗೆ ದಾರಿ ಮಾಡಿಕೊಡುವುದಲ್ಲದೆ ರೋಗಿಗಳ ಆರೈಕೆ ಸರಿಯಾಗುವುದಿಲ್ಲ ಮತ್ತು ಹೊಸಬರಿಗೆ ಅವಕಾಶಗಳು ಸಿಗುವುದಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.