ಕನ್ನಡಪ್ರಭ ವಾರ್ತೆ ಕೆಜಿಎಫ್
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಜೀತ ವಿಮುಕ್ತಿ, ಜೀತದಾಳುಗಳ ಬಿಡುಗಡೆ ಮತ್ತು ಪುನರ್ವಸತಿ ಹಾಗೂ ಕಾನೂನು ಕುರಿತು ವಿಚಾರ ಸಂಕೀರ್ಣವನ್ನು ಹಮ್ಮಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಿದೆ, ಆಗಲೇ ಇದನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ, ಅದಕ್ಕಾಗಿ ಯಾವುದೇ ಕಾರಣಕ್ಕೂ ನಿಷ್ಕಾಳಜಿತನ ವಹಿಸಬಾರದು, ಸರಕಾರ ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ್‌ಕುಮಾರ್ ಮಾತನಾಡಿ, ಜೀತದಾಳು ಸಾಲಮುಕ್ತ ಮಾಡಿ ಸೌಲಭ್ಯ ಒದಗಿಸಲು ಕಾಯ್ದೆ- ಕಾನೂನುಗಳಲ್ಲಿ ಅವಕಾಶವಿದೆ, ಜೀತ ವಿಮುಕ್ತಿ ಹೊಂದಿದವರಿಗೆ ದೊರೆಯುವ ಸರಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು,ಯಾರನ್ನೇ ಆದರೂ ಜೀತದಾಳಾಗಿ ಇಟ್ಟುಕೊಂಡು, ಅಕ್ರಮವಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾದ, ಆಧುನಿಕ ಕಾಲದಲ್ಲೂ ಕೆಲವಡೆ ವರದಿಯಾಗಿರುವ ಈ ಅನಿಷ್ಠ ಪದ್ಧತಿ ನಿರ್ಮೂಲನೆಯಾಗಬೇಕಾದರೆ ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ, ಜೀತ ಪದ್ಧತಿಗೆ ಸಂಬಂಧಿಸಿದಂತೆ ಇಂತಹ ಅಪರಾಧಗಳಿಗೆ ಕಾನೂನಿನಡಿ ಮೂರು ವರ್ಷ ಕಾರಾಗೃಹ ವಾಸ ಮತ್ತು ದಂಡವನ್ನು ವಿಧಿಸಬಹುದಾಗಿದೆ ಎಂದರು.
ತಾಲೂಕು ಪಂಚಾಯ್ತಿ ಇಒ ವೆಂಕಟೇಶಪ್ಪ ಮಾತನಾಡಿ, ತಾಲೂಕಿನಲ್ಲಿ ಜೀತ ಪದ್ಧತಿಯಿಂದ ೨೬ ಜನರು ಬಿಡುಗಡೆಗೊಂಡು ಜೀತ ವಿಮುಕ್ತರಾಗಿದ್ದಾರೆ, ಜೀತ ಪದ್ಧತಿಯಲ್ಲಿ ವಿಮುಕ್ತಗೊಂಡಿರುವವರಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಜೀವನ ನಡೆಸಲು ಬ್ಯಾಂಕ್‌ನಿಂದ ಸಾಲ, ಸರಕಾರದಿಂದ ಸಿಗುವ ಸೌಲತ್ತುಗಳನ್ನು ಕಲ್ಪಿಸಲಾಗಿದ್ದು, ಮಕ್ಕಳು ಮತ್ತು ವಯಸ್ಕರು ಕಾಣೆಯಾದ ಪ್ರಕರಣಗಳನ್ನು ಪತ್ತೆ ಹಚ್ಚಲು ಗ್ರಾಮಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ, ಈ ಸಮಿತಿಯು ಸಕ್ರಿಯವಾದಲ್ಲಿ ಮಕ್ಕಳು ಮತ್ತು ಮಾನವನ ಕಳ್ಳ ಸಾಗಾಣೆ ಮಾಡುವುದನ್ನು ಹಾಗೂ ಜೀತ ಪದ್ಧತಿಯನ್ನು ತಡೆಯಬಹುದೆಂದು ಅಭಿಪ್ರಾಯಪಟ್ಟರು, ಜೀತ ವಿಮುಕ್ತಿ ಸಮಿತಿಯೊಂದಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಕರು ಸಹ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.
ಜೀತ ವಿಮುಕ್ತಿ ಕಾರ್ಯಾಗಾರದಲ್ಲಿ ವಿಶೇಷ ಅತಿಥಿಗಳಾದ ಡಾ.ಕಿರಣ್ ಕಮಲ್ ಪ್ರಸಾದ್ ಹಾಗೂ ಮಹಿಳಾ ವಕೀಲರಾದ ಕಲೈಸೆಲ್ವಿ ಅವರು ಜೀತ ಮಿಮುಕ್ತಿ ಸವಿಸ್ತಾರವಾಗಿ ಮಾತನಾಡಿದರು.ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ಕಾರ‍್ಯದರ್ಶಿ ನಾಗರಾಜ್, ಮನೋಹರ್, ಗ್ರಾಮ ಪಂಚಾಯ್ತಿ ಪಿಡಿಒಗಳು ಹಾಗೂ ಎಲ್ಲ ಇಲಾಖೆಗಳ ಸರಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.