ಕನ್ನಡಪ್ರಭ ವಾರ್ತೆ ಶಿರಾ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಸಧೃಢವಾದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರ ಶೀಘ್ರದಲ್ಲಿಯೇ ಸುಮಾರು 3000 ಕೆಪಿಎಸ್ ಪ್ರಾರಂಭ ಮಾಡಲಾಗುತ್ತಿದೆ. ಇದರಿಂದ ಸರಕಾರಿ ಶಾಲೆಗಳಲ್ಲಿ ಶೇ. 100 ರಷ್ಟು ದಾಖಲಾತಿ ಆಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಹೇಳಿದರು. ಅವರು ಮಂಗಳವಾರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜಿ.ಪಂ, ತಾ.ಪಂ., ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ವೃತ್ತಿ ಶಿಕ್ಷಣ ಕಲಿಕೊತ್ಸವ ಮತ್ತು ಪಠ್ಯಾಧಾರಿತ ವಸ್ತು ಪ್ರದರ್ಶನ ಹಾಗೂ 2024-25 ನೇ ಸಾಲಿನ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆಸ್ಟ್ರೇಲಿಯಾ ದೇಶದಲ್ಲಿ ಶೇ. 90ಕ್ಕೂ ಹೆಚ್ಚು ಮಕ್ಕಳು ಸರಕಾರಿ ಶಾಲೆಗೆ ದಾಖಲಾಗುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಆಗಬೇಕು. ಶೇ. 100 ರಷ್ಟು ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ಹೋಗುವ ರೀತಿ ಮಾಡಬೇಕು ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಇರುವ ಪ್ರತಿಭೆಗಳನ್ನು ಹೊರತರಲು ಈ ರೀತಿಯ ಕಾರ್ಯಕ್ರಮಗಳು ಸತತವಾಗಿ ನಡೆಯಬೇಕು. ನಾವೆಲ್ಲರೂ ಕೂಡಿ ಬದಲಾವಣೆ ತರೋಣ. ಮಕ್ಕಳನ್ನು ಈಗಿನ ಸ್ಪರ್ಧಾತ್ಮಕ ಯುಗಕ್ಕೆ ಹೇಗೆ ತಯಾರಿ ಮಾಡಬೇಕು ಎಂಬುದು ಶಿಕ್ಷಕರಿಗೆ ಸವಾಲು. ಆ ಸವಾಲನ್ನು ಮೆಟ್ಟಿ ನಿಂತು ಶಿಕ್ಷಕರು ಸಹ ನಮ್ಮ ವೃತ್ತಿ ಜೀವನದಲ್ಲಿ ಈಗಿನ ಕಾಲಘಟ್ಟಕ್ಕೆ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳಬೇಕು ಎಂದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಬಿ.ಎಚ್.ಗಿರಿಜಾ ಅವರು ಮಾತನಾಡಿ, ಉತ್ತಮ ಸಮಾಜವನ್ನು ಕಟ್ಟಲು ಎಲ್ಲಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಬೇಕು. ಮಕ್ಕಳಲ್ಲಿ ಕೌಶಲ್ಯ ಬೆಳೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿಯಲ್ಲಿ ವಿವಿಧ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದ ಅವರು ವಿಧಾನಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಅವರು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿನ ಸರಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ಅನುದಾನ ತಂದಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜೀಷನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಡಯಟ್ ಪ್ರಾಂಶುಪಾಲ ಗಂಗಾಧರ್ ಎಚ್.ಆರ್., ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎನ್.ಕೃಷ್ಣಪ್ಪ, ಎಂ.ವಿ. ರಾಜಣ್ಣ, ನಗರಸಭೆ ಸದಸ್ಯರಾದ ಮೊಹಮ್ಮದ್ ಜಾಫರ್, ಫಯಾಜ್ ಖಾನ್, ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಬೀನಾ ಪರ್ವೀನ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್.ಎಂ. ಶೆಟ್ಟಿಮನಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಚಂದ್ರಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಂಗಪ್ಪ, ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಚಂದ್ರಯ್ಯ ತಾಲ್ಲೂಕು ದೈಹಿಕ ಶಿಕ್ಷಣ ನಿರ್ದೇಶಕ ಆರ್ ನಾಗರಾಜು, ಸರಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು ಬಿ.ಆರ್., ಲಕ್ಷ್ಮಣ್ ಎಚ್., ಉಪ ಪ್ರಾಂಶುಪಾಲ ರಾಘವೇಂದ್ರ ಎನ್., ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಕಾರ್ಯದರ್ಶಿ ದೇವರಾಜು ಆರ್. ಸೇರಿದಂತೆ ಹಲವರು ಹಾಜರಿದ್ದರು.