ಮುಂಡರಗಿ: ಕಳೆದ 4-5 ದಿನದಿಂದ ಆಸ್ಪತ್ರೆಯ ವೈದ್ಯರು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿಲ್ಲ. ಅವರ ಹೆಸರಿನ ಮುಂದೆ ಗೈರು ಹಾಜರಿ ಎಂದೂ ಬರೆದಿಲ್ಲ ಮತ್ತು ರಜೆ ಚೀಟಿ ಕೊಟ್ಟಿಲ್ಲ, ಹೀಗಾದರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ವ್ಯವಸ್ಥಿತವಾಗಿ ವೈದ್ಯಕೀಯ ಸೌಲಭ್ಯ ಹೇಗೆ ಸಿಗುತ್ತದೆ ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಪ್ರಶ್ನಿಸಿದರು.
ಲೋಕಾಯುಕ್ತ ತಂಡ ಶನಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೆಟಿ ನೀಡಿ, ಪರಿಶೀಲನೆ ಮಾಡಿ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಅವರಿಗೆ ಈ ಕುರಿತು ಮಾಹಿತಿ ಕೇಳಿದರು.ಅನೇಕ ವೈದ್ಯರು ಹಾಜರಿ ಪುಸ್ತಕದಲ್ಲಿಯ ಹೆಸರು ಹೇಳಿ ಇವರು ಯಾವ ದಿನಾಂಕದಿಂದ ಸಹಿ ಮಾಡಿಲ್ಲ, ಇದು ಹೀಗೆ ಮುಂದುವರೆದರೆ ಪರಿಣಾಮ ನೆಟ್ಟಗಿರಲ್ಲ. ವೈದ್ಯಾಧಿಕಾರಿಗಳಾದ ನೀವು ಇದನ್ನು ಸರಿಪಡಿಸುವ ಕ್ರಮ ಜರುಗಿಸಬೇಕೆಂದು ಸೂಚಿಸಿದರು.
ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸ್ಪೇಷಾಲಿಸ್ಟ್ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರು ಗೈರು ಹಾಜರ ಉಳಿಯುತ್ತಿರುವುದು ಸರಿಯಾದ ಕ್ರಮವಲ್ಲ. ಇದನ್ನು ಕೂಡಲೇ ಸರಿಪಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿ ಹಾಜರಿ ಪುಸ್ತಕದ ಝರಾಕ್ಸ ಪ್ರತಿ ಪಡೆದುಕೊಂಡರು.ಆಸ್ಪತ್ರೆಯ ರೋಗಿಗಳಿಗೆ ಕುಡಿಯಲು ನೀರು, ಬಾಣಂತಿಯರಿಗೆ ಬಿಸಿ ನೀರು ಮತ್ತು ಶೌಚಾಲಯದ ಸೌಲಭ್ಯ ಸಮರ್ಪಕವಾಗಿದೆಯೇ ಎಂದು ಪ್ರಶ್ನಿಸಿದಾಗ ಇದಕ್ಕೆಲ್ಲ ನೆಗೆಟಿವ್ ಉತ್ತರ ಸಿಕ್ಕಿತು. ಆಸ್ಪತ್ರೆಯ ಬಹುತೇಕ ಶಾಚಾಲಯಗಳಿಗೆ ನೀರಿನ ಸೌಲಭ್ಯಗಳಿಲ್ಲದೆ ಮುಚ್ಚಿಕೊಂಡಿವೆ ಮತ್ತು ನಾಟ್ ವರ‍್ಕಿಂಗ್ ಎಂಬ ಬೋರ್ಡ್ ತೂಗು ಹಾಕಿಕೊಂಡಿರುವುದು ಕಂಡುಬರುತ್ತದೆ. ಬಾಣಂತಿಯರ ಕೊಠಡಿಯಲ್ಲಿಯೇ ಇರಬೇಕಾದ ಶಾಚಾಲಯಗಳು ಬೇರೆ ಕಡೆ ಇರುವುದನ್ನು ಗಮನಿಸಿದ ಲೋಕಾಯುಕ್ತರು ಹಾಗಾಗದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಆಸ್ಪತ್ರೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಡೇಟ್ ಡಿಬಾರ್ ಇಂಜಕ್ಸನ್‌ಗಳಿವೆ. ಫಾರ‍್ಮಂಸಿಯಲ್ಲಿ ಒಂದು ತಿಂಗಳು ಮತ್ತು 15 ದಿನಗಳಲ್ಲಿ ಡೇಟ್ ಡಿಬಾರ್ ಆಗುವ ಔಷಧಿಗಳಿವೆ. ಅವುಗಳ ಬಗ್ಗೆ ಎಚ್ಚರ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದೇನೆ ಎಂದರು.ಲೋಕಾಯುಕ್ತ ತಂಡ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ರೋಗಿಗಳಿಗೆ ಮತ್ತು ಬಾಣಂತಿಯರಿಗೆ ಊಟದ ವ್ಯವಸ್ಥೆ ಇದೆಯೇ ಎಂದು ಕೇಳಿದಾಗ ವೈದ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ ಮಾತನಾಡಿ, ಊಟದ ವ್ಯವಸ್ಥೆ ಆಸ್ಪತ್ರೆಯ ಆವರಣದಲ್ಲಿರುವ ಹೋಟೆಲ್‌ಗೆ ವಹಿಸಿಕೊಟ್ಟಿದ್ದೇವೆ, ಅದು ಸರಿಯಾಗಿ ನಡೆಯುತ್ತಿದೆ ಎಂದರು. ಹಾಗಾದರೆ ಅದರ ಲೆಕ್ಕದ ಕಡತ ಕೇಳಿದಾಗ, ಕಡತ ಇಲ್ಲದಾಗ ವ್ಯವಸ್ಥೆ ಸರಿಪಡಿಸುವಂತೆ ಲೋಕಾಯುಕ್ತರು ಹೇಳಿದರು.
ಈ ಸಂದರ್ಭದಲ್ಲಿ ಇನ್ಸಪೆಕ್ಟರ್ ಪರಮೇಶ್ವರ ಕೌವಟಗಿ, ಎಸ್.ಎಸ್.ತೇಲಿ ಹಾಗೂ ಸಿಬ್ಬಂದಿ ಇದ್ದರು.