ಬಹುಗ್ರಾಮ ಕುಡಿವ ನೀರಿನ ಯೋಜನೆ ವ್ಯಾಪ್ತಿಯ ನೀರು ಪರೀಕ್ಷೆ

KannadaprabhaNewsNetwork |  
Published : Jan 19, 2025, 02:19 AM IST
ಹೂವಿನಹಡಗಲಿ ತಾಲೂಕಿನ ಮದಲಗಟ್ಟಿ ಬಳಿ ತುಂಗಭದ್ರ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು. | Kannada Prabha

ಸಾರಾಂಶ

ಕಳೆದೊಂದು ವಾರದಿಂದ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ.

ಹೂವಿನಹಡಗಲಿ: ತಾಲೂಕಿನ ತುಂಗಭದ್ರ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ನೀರು ಕುಡಿಯಲು ಯೋಗ್ಯ ಇದೆಯೇ ಎಂಬ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನೀರು ಪರೀಕ್ಷೆ ಮಾಡಲಾಗುತ್ತಿದೆ.

ಈಗಾಗಲೇ ಕಳೆದೊಂದು ವಾರದಿಂದ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ತಹಸೀಲ್ದಾರ್‌ ಜಿ.ಸಂತೋಷಕುಮಾರ್‌ ತಾಪಂ ಇಒ, ಪುರಸಭೆ ಮುಖ್ಯಾಧಿಕಾರಿ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಕುಡಿವ ನೀರಿನ ಬಗ್ಗೆ ಜಾಗೃತಿ ವಹಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನೀರು ಪರೀಕ್ಷೆಗೆ ಮುಂದಾಗಿದ್ದಾರೆ.

ಹರವಿ, ಕುರುವತ್ತಿ, ಮೈಲಾರ, ಬ್ಯಾಲಹುಣ್ಸಿ-ಹೊಸಹಳ್ಳಿ, ಹಿರೇಹಡಗಲಿ- ಮಾಗಳ, ಹೊಳಲು, ಕೆ.ಅಯ್ಯನಹಳ್ಳಿ, ಕತ್ತೆಬೆನ್ನೂರು, ಮಾನ್ಯರ ಮಸಲವಾಡ, ಬೂದನೂರು, ರಾಜವಾಳ, ಹೊನ್ನನಾಯಕನಹಳ್ಳಿ, ಕಂದಗಲ್ಲು-ಪುರ, ಅಂಕ್ಲಿ, ಹೊಳಗುಂದಿ- ಉತ್ತಂಗಿ, ಕೊಂಬಳಿ ಸೇರಿದಂತೆ ಎಲ್ಲ ಬಹುಗ್ರಾಮ ಕುಡಿವ ನೀರಿನ ಯೋಜನೆ ವ್ಯಾಪ್ತಿಯ ಕಚ್ಚಾ ನೀರು ಕುಡಿಯಲು ಅಸುಕ್ಷಿತವಾಗಿದೆ. ಆದರೆ ಬಹು ಗ್ರಾಮ ಕುಡಿವ ನೀರಿನ ಯೋಜನೆಯಿಂದ ಶುದ್ಧೀಕರಣಗೊಂಡ ನೀರು ಕುಡಿಯಲು ಯೋಗ್ಯವಾಗಿದೆ. ಯಾವುದೇ ಕಾರಣಕ್ಕೂ ಜನ ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಾಥಮಿಕ ಮಾಹಿತಿ ಬಂದಿದೆ.

ಆರೋಗ್ಯ ಇಲಾಖೆಯಿಂದಲ್ಲೂ ಎಲ್ಲ ಹಳ್ಳಿಗಳ ವ್ಯಾಪ್ತಿಯಲ್ಲಿನ ನದಿಯಲ್ಲಿನ ಕುಡಿವ ನೀರು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಆದರೆ ಇನ್ನು ವರದಿ ಬಂದಿಲ್ಲ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕೆಳ ಭಾಗದಲ್ಲಿನ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಆದರೆ, ಯೋಜನೆಯ ಹಿನ್ನೀರಿನಲ್ಲಿ ಈ ರೀತಿಯ ಬಣ್ಣ ಬಂದಿಲ್ಲ. ಈಗಾಗಲೇ ನಾವು ಕೂಡ ನೀರು ಪರೀಕ್ಷೆ ಮಾಡಿಸಿದ್ದೇವೆ. ನಮ್ಮ ಬ್ಯಾರೇಜ್‌ ಕೆಳಗಿರುವ ನೀರು ತುಂಗಭದ್ರಾ ಜಲಾಶಯಕ್ಕೆ ಸಂಬಂಧಪಟ್ಟಿದೆ. ಜತೆಗೆ ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಕೈಗಾರಿಕೆ ಇಲ್ಲದ ಕಾರಣ ನೀರು ಕಲುಷಿತಗೊಂಡಿಲ್ಲ. ನೀರು ಶುದ್ಧವಾಗಿಯೇ ಇದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಜಿ.ಆರ್‌.ಶಿವಮೂರ್ತಿ.

ನಮ್ಮ ಇಲಾಖೆಯಲ್ಲಿರುವ ಪ್ರಯೋಗಾಲಯದಲ್ಲಿ ಎಲ್ಲ ಬಹುಗ್ರಾಮ ಕುಡಿವ ನೀರಿನ ಯೋಜನೆ ವ್ಯಾಪ್ತಿಯಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ಮಾಡಿದ್ದೇವೆ. ಕಚ್ಚಾ ನೀರು ಕುಡಿಯಲು ಯೋಗ್ಯವಾಗಿಲ್ಲ. ಆದರೆ ಯೋಜನೆಯಿಂದ ನೀರು ಶುದ್ಧೀಕರಣ ಮಾಡಲಾಗುತ್ತಿದೆ. ಆ ನೀರು ಯೋಗ್ಯವಾಗಿದೆ. ಜನ ಆತಂಕಪಡುವ ಅಗತ್ಯವಿಲ್ಲ. ಜತೆಗೆ ಹೊಸಪೇಟೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲಾಗಿದೆ. ಈ ಕುರಿತು ವರದಿ ನೀಡುವಂತೆ ತಿಳಿಸಲಾಗಿದೆ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅಂಬೇಡ್ಕರ್‌ ಮಾಹಿತಿ ನೀಡಿದರು.

ನದಿ ತೀರದ ಗ್ರಾಮಗಳಲ್ಲಿರುವ ಜಾನುವಾರುಗಳಿಗೆ ತುಂಗಭದ್ರಾ ನದಿ ನೀರು ಜೀವಾಳವಾಗಿದೆ. ಜನರಿಗೆ ಸಂಬಂಧಪಟ್ಟ ಇಲಾಖೆಯಿಂದ ಶುದ್ಧ ನೀರು ಪೂರೈಕೆ ಮಾಡುತ್ತಾರೆ. ಆದರೆ ಜಾನುವಾರುಗಳು ಇದೇ ಹಸಿರು ಬಣ್ಣಕ್ಕೆ ತಿರುಗಿರುವ ನೀರನ್ನೇ ಕುಡಿಯಬೇಕಿದೆ. ಜತೆಗೆ ರೈತರು ತಮ್ಮ ಬೆಳೆಗಳಿಗೆ ಇದೇ ನೀರನ್ನು ಬಳಕೆ ಮಾಡುವುದರಿಂದ ಬೆಳೆಗಳಿಗೆ ರೋಗ ರುಜಿನ ಬರುವ ಭಯದಲ್ಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ
ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 30 ಮಂದಿ ತಂಡ ರಚಿಸಿದ ಸರ್ಕಾರ