ಬಸವರಾಜ ಹಿರೇಮಠ
ಜನರಿಗೆ ಬರದ ಬಿಸಿ ತಾಗದಂತೆ ಮತ್ತು ಸೂಕ್ತ ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಾಗುವಂತೆ ಪರಿಸ್ಥಿತಿಯನ್ನು ನಿರ್ವಹಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲೆ ಇದ್ದೇ ಇದೆ. ಇಂತಹ ಸಂದರ್ಭದಲ್ಲಿ ಬರ ನಿರ್ವಹಣೆ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ಸಾಮಾನ್ಯವಾಗಿ ಚುನಾಯಿತ ಪ್ರತಿನಿಧಿಗಳ ಮೇಲಿರುತ್ತದೆ. ಆದರೆ, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅನುಪಸ್ಥಿತಿ ಒಂದು ರೀತಿಯಲ್ಲಿ ಚಿಂತೆ ತಂದಿದೆ. ಜತೆಗೆ ಬರ ಪರಿಹಾರ ಮತ್ತಿತರ ಕಾರ್ಯಗಳು ಎಷ್ಟರ ಮಟ್ಟಿಗೆ ಸಮರ್ಪಕವಾಗಿ ನಡೆಯಲಿವೆ ಎಂಬ ಪ್ರಶ್ನೆ ಉದ್ಭವಿಸಿದೆ.
ಕಿತ್ತೂರಿನಿಂತ ಆಡಳಿತಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಕೊಲೆ ಪ್ರಕರಣದಲ್ಲಿ ಕ್ಷೇತ್ರ ಪ್ರವೇಶಿಸದಂತೆ ನ್ಯಾಯಾಲಯದಿಂದ ನಿರ್ಬಂಧಕ್ಕೆ ಒಳಗಾಗಿದ್ದರೂ ಇಷ್ಟು ದಿನಗಳ ಕಾಲ ಪಕ್ಕದ ಕಿತ್ತೂರಿನಿಂದ ಕ್ಷೇತ್ರದ ಆಗು-ಹೋಗುಗಳ ಉಸ್ತುವಾರಿ ಮಾಡುತ್ತಿದ್ದರು. ಕಿತ್ತೂರಿನಲ್ಲಿಯೇ ತಮ್ಮ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿ, ಪ್ರಗತಿ ಪರಿಶೀಲನೆ ಮಾಡಿದ ಹಲವು ಉದಾಹರಣೆಗಳಿವೆ. ಕ್ಷೇತ್ರದಲ್ಲಿ ಅವರ ಪ್ರತಿನಿಧಿಯಾಗಿ ವಿನಯ ಅವರ ಪತ್ನಿ, ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಶಿವಲೀಲಾ ಮತ್ತು ಪಕ್ಷದ ಇತರ ಮುಖಂಡರು ದಿನನಿತ್ಯದ ಪ್ರಗತಿ ಉಸ್ತುವಾರಿ ಮಾಡುತ್ತಿದ್ದರು.
ಶಾಸಕರಾಗಿ ಆಯ್ಕೆಯಾದಾಗಿನಿಂದಲೂ ವಿನಯ ಕುಲಕರ್ಣಿ ತಮ್ಮ ಕ್ಷೇತ್ರ ಪ್ರವೇಶಿದೇ ಇರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂಬ ಮಾತುಗಳೂ ಇವೆ. ಇದೀಗ ಅವರನ್ನು ಅಪರಾಧಿ ಎಂದು ನ್ಯಾಯಾಲಯ ತೀರ್ಪಿತ್ತಿರುವ ಹಿನ್ನೆಲೆಯಲ್ಲಿ ಅವರು ಯಾವುದೇ ಕೆಲಸ-ಕಾರ್ಯಗಳ ಬಗ್ಗೆ ಹಸ್ತಕ್ಷೇಪ ಮಾಡುವಂತಿಲ್ಲ. ಜತೆಗೆ ಅವರ ಪರವಾಗಿ ಯಾರೂ ಉಸ್ತುವಾರಿ ಮಾಡುವಂತಿಲ್ಲ.
ಧಾರವಾಡ ಕ್ಷೇತ್ರದ ಶಾಸಕರಾದ ವಿನಯ ಕುಲಕರ್ಣಿ ಅವರನ್ನು 1951ರ ಪ್ರಜಾಪ್ರತಿನಿಧಿ ಕಾಯ್ದೆ 8(3)ರ ಅಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ವಿಧಾನಸಭಾ ಸಭಾಧ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ವಿನಯ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಕನಿಷ್ಠ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಶಿಕ್ಷೆಗೆ ಒಳಗಾದರೆ ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹ ಆಗುತ್ತಾರೆ. ಇತ್ತೀಚೆಗೆ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಅವರ ದೋಷಿ ಎಂದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ವಿಧಾನಸಭೆ ತ್ವರಿತವಾಗಿ ಕ್ರಮ ಕೈಗೊಂಡಿತ್ತು. ಇದೇ ನಿಯಮ ವಿನಯ ಕುಲಕರ್ಣಿ ಅವರಿಗೆ ಅನ್ವಯಿಸಬೇಕೆಂದು ಕೊರವರ ಆಗ್ರಹಿಸಿದ್ದಾರೆ.