ಶಿರಸಿ: ನಗರದ ಆಡಳಿತ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಾದ ಕಾರಣ ಕೆಂಡಾಮಂಡಲರಾದ ಶಾಸಕ ಭೀಮಣ್ಣ ನಾಯ್ಕ, ಸಭೆ ರದ್ದುಗೊಳಿಸಿ ಹೊರನಡೆದು, ಮುಂದಿನ ವಾರ ಸಭೆ ಏರ್ಪಡಿಸಲು ಅಧಿಕಾರಿಗಳಿಗೆ ಆದೇಶಿಸಿದರು.
ಕಳೆದ ೧೫ ದಿನಗಳ ಹಿಂದೆಯೇ ಈ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲು ಉದ್ದೇಶಿಸಿ ಎಲ್ಲ ಇಲಾಖೆಗಳಿಗೂ ಸುತ್ತೋಲೆ ಕಳುಹಿಸಲಾಗಿತ್ತು. ಅಧಿಕಾರಿಗಳು ಈ ರೀತಿಯ ನಿರ್ಲಕ್ಷ್ಯ ವಹಿಸುವುದನ್ನು ಸಹಿಸುವುದಿಲ್ಲ. ಮಳೆಗಾಲಕ್ಕೆ ಇಲನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈ ಹಂತದಲ್ಲಿ ಆಗಬೇಕಾದ ಕಾಮಗಾರಿಗಳೇನು? ಯಾವ ಕೆಲಸ ಎಷ್ಟಾಗಿದೆ? ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ, ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ ಎಂದು ಆಕ್ಷೇಪಿಸಿದರು.
ಬಳಿಕ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಭೀಮಣ್ಣ ನಾಯ್ಕ, ತ್ರೈಮಾಸಿಕ ಕೆಡಿಪಿ ಸಭೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ, ಈ ಸಭೆಯನ್ನು ನಡೆಸದೇ ಮುಂದೂಡುತ್ತಿದ್ದು, ಮುಂದಿನ ದಿನಾಂಕ ನಿಗದಿಪಡಿಸಿ ಎಲ್ಲ ಸಿದ್ಧತೆಗಳೊಂದಿಗೆ ಆಗಮಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಭೆಯಿಂದ ಹೊರ ನಡೆದರು.ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಭೀಮಣ್ಣ ನಾಯ್ಕ, ಶಾಲೆಗಳು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಮಳೆಗಾಲದ ಸಿದ್ಧತೆಗೆ ಚರ್ಚಿಸಬೇಕಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿ ತೋರಿದ್ದು, ಕಾಟಾಚಾರಕ್ಕೆ ಕೆಡಿಪಿ ಸಭೆ ನಡೆಸಲು ನಾನು ಸಿದ್ಧನಿಲ್ಲ. ಈ ಕುರಿತಂತೆ ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದ್ದೇನೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತೋಟಗಾರಿಕೆ ಇಲಾಕೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ ಮತ್ತಿತರರು ಇದ್ದರು.