ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು: ನೋಟಿಸ್‌ ನೀಡಲು ಸೂಚನೆ

KannadaprabhaNewsNetwork | Published : Jun 18, 2024 12:53 AM

ಸಾರಾಂಶ

ಮುಂದಿನ ಸಭೆಗೆ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿಗಳೊಂದಿಗೆ ಭಾಗವಹಿಸಬೇಕು ಎಂದು ತಾಕೀತು ಮಾಡಿದರು.

ಕುರುಗೋಡು: ಅಂಕಿ-ಅಂಶಗಳ ಮಾಹಿತಿ ಇಲ್ಲದೇ ತಾಲೂಕು ಮಟ್ಟದ ಅಧಿಕಾರಿಗಳ ಪರ ಭಾಗವಹಿಸಿದ್ದ ಅಧಿಕಾರಿಗಳು ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಲು ತಡಕಾಡಿದ ಪ್ರಸಂಗ ಶನಿವಾರ ಜರುಗಿತು.ಪಟ್ಟಣದಲ್ಲಿ ತಾಪಂ ಆಡಳಿತಾಧಿಕಾರಿ ಎಸ್.ಎಂ. ವಾಗೀಶ ಶಿವಾಚಾರ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕೆಡಿಪಿ ಸಭೆಗೆ ಲೋಕೋಪಯೋಗಿ, ಶಿಕ್ಷಣ, ಜೆಸ್ಕಾಂ, ಮತ್ತು ಸಮಾಜಕಲ್ಯಾಣ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಲು ಅವರ ಪರವಾಗಿ ಬಂದ ಅಧಿಕಾರಿಗಳು ತಡಕಾಡಿದರು.

ಮುಂದಿನ ಸಭೆಗೆ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿಗಳೊಂದಿಗೆ ಭಾಗವಹಿಸಬೇಕು ಎಂದು ತಾಕೀತು ಮಾಡಿದರು.

ಮಾಹಿತಿ ನೀಡಿದರೂ ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟಿಸ್‌ ನೀಡುವಂತೆ ತಾಪಂ ಇಒ ಕೆ.ವಿ. ನಿರ್ಮಲಾ ಅವರಿಗೆ ಸೂಚನೆ ನೀಡಿದರು.

ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಕೆಲವು ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ಸಂಗ್ರಹವಾಗಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಮಳೆಯ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

೭೬ ಟಿಬಿ ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿವೆ. ತಾಲೂಕಿನ ಕೋಳೂರು ಗ್ರಾಮದಲ್ಲಿ ಒಬ್ಬ ಡೆಂಘೀ ಮತ್ತು ಕುರುಗೋಡು ಪಟ್ಟಣದಲ್ಲಿ ಒಬ್ಬರು ವಾಂತಿಭೇದಿಯಿಂದ ಮೃತಪಟ್ಟಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ ಜವಳಿ ಸಭೆಯಲ್ಲಿ ಮಾಹಿತಿ ನೀಡಿದರು.

ಮಳೆಗಾಲದಲ್ಲಿ ಸೊಳ್ಳೆಕಡಿತದಿಂದ ಬರುವ ರೋಗಳ ಜತೆಗೆ ಕಲುಷಿತ ನೀರು ಸೇವನೆಯಿಂದ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಎಲ್ಲ ಗ್ರಾಮಗಳಲ್ಲಿರುವ ಜಲಮೂಲಗಳಿಂದ ನೀರು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ. ಕುಡಿಯಲು ಯೋಗ್ಯವಿಲ್ಲದಿದ್ದರೆ ನೀರು ಸರಬರಾಜು ಮಾಡದಿರಲು ಗ್ರಾಮಪಂಚಾಯಿತಿಗೆ ಸೂಚಿಸಿ ಮತ್ತು ಸಕ್ರಿಯವಾಗಿರುವ ಟಿಪಿ ಕಾಯಿಲೆ ನಿಯಂತ್ರಿಸಲು ರೋಗಿಗಳ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಆಡಳಿತಾಧಿಕಾರಿ ವಾಗೀಶ ಶಿವಾಚಾರ್ಯ ಸೂಚಿಸಿದರು.

ಅಂಗನವಾಡಿಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಡಿಪಿಒ ಮೋಹನ್ ಕುಮಾರಿ, ಈ ವರ್ಷ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಜರುಗುತ್ತಿವೆ. ಇದರಿಂದ ದಾಖಲಾತಿ ಕಡಿಮೆಯಾಗಿದೆ. ಕಾರ್ಯಕರ್ತೆಯರು ಹೋರಾಟ ಮಾಡುತ್ತಿದ್ದಾರೆ ಎಂದರು.

ಕೂಸಿನ ಮನೆಯ ಜವಾಬ್ದಾರಿ ತೆಗೆದುಕೊಳ್ಳಿ ಎಂದರೆ ಬೇಡ ಎನ್ನುತ್ತೀರುವ ನೀವು. ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಡಿ ಎಂದು ಹೋರಾಟ ಮಾಡುತ್ತಿರುವುದು ಯಾವ ಸೀಮೆ ನ್ಯಾಯ ಎಂದು ಮರು ಪ್ರಶ್ನೆಹಾಕಿದರು.

ತಾಪಂ ಇಒ ಕೆ.ವಿ.ನಿರ್ಮಲಾ ಮತ್ತು ನರೇಗಾ ತಾಲೂಕು ಸಹಾಯಕ ನಿರ್ದೇಶಕ ಶಿವರಾಮ ರೆಡ್ಡಿ ಮತ್ತು ತಾಲೂಕು ಯೋಜನಾಧಿಕಾರಿ ರಾಧಿಕಾ ಇದ್ದರು.

Share this article