ಕಾರ್ಖಾನೆ ವಿರುದ್ಧದ ಹೋರಾಟ ಸಭೆಗೆ ಶಾಸಕ ರಾಘವೇಂದ್ರ ಹಿಟ್ನಾಳ ಗೈರು, ಆಕ್ರೋಶ

KannadaprabhaNewsNetwork | Published : Jul 1, 2025 12:47 AM

ಬಲ್ದೋಡ್‌ ಕಾರ್ಖಾನೆ ವಿರುದ್ಧ ಬೃಹತ್‌ ಹೋರಾಟದ ಕುರಿತು ತಾವೇ ಸಭೆಯ ದಿನಾಂಕ, ಸಮಯ ನಿಗದಿ ಮಾಡಿದ್ದರೂ ಏಕೆ ಬರಲಿಲ್ಲ. ಅಂದು ಬರದೆ ಇದ್ದರೆ ಬೇರೆ ದಿನವಾದರೂ ಸಭೆ ನಿಗದಿ ಮಾಡಬೇಕಿತ್ತು. ಅದನ್ನು ಸಹ ಶಾಸಕರು ಮಾಡಿಲ್ಲವೆಂದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಕೊಪ್ಪಳ:

ಬಲ್ಡೋಟಾ ಕಾರ್ಖಾನೆ ವಿರುದ್ಧ ಮುಂದಿನ ಹೋರಾಟದ ಕುರಿತು ಚರ್ಚಿಸಲು ನಗರದ ಪ್ರವಾಸಿಮಂದಿರದಲ್ಲಿ ಜು.27ರಂದು ಕರೆದಿದ್ದ ಸಭೆಗೆ ಬರುವುದಾಗಿ ಹೇಳಿ, ಗೈರಾದ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಸಂಪರ್ಕಿಸಿಯೇ ಜು. 27ರಂದು ಬೆಳಗ್ಗೆ 11ಕ್ಕೆ ಸಭೆ ನಿಗದಿಪಡಿಸಿತ್ತು. ಅವರು ಮಧ್ಯಾಹ್ನ 3 ಗಂಟೆ ಆದರೂ ಬಾರದ ಹಿನ್ನೆಲೆ ಸಭೆ ಮೊಟಕುಗೊಳಿಸಿ ಹೋರಾಟಗಾರರು ತೆರಳಿದ್ದರು. ಇದಾದ ಬಳಿಕ ಶಾಸಕರು 3 ಗಂಟೆಗೆ ಬರುವುದಾಗಿ ಹೇಳಿದ್ದಾರೆ. ಅದಾಗಲೇ ಹೋರಾಟಗಾರರು ವಾಪಾಸ್‌ ಹೋಗಿದ್ದರಿಂದ ಸಭೆ ನಡೆಯಲಿಲ್ಲ.

ಸಮಯಕ್ಕೆ ಏಕೆ ಬರಲಿಲ್ಲ:

ಬಲ್ದೋಡ್‌ ಕಾರ್ಖಾನೆ ವಿರುದ್ಧ ಬೃಹತ್‌ ಹೋರಾಟದ ಕುರಿತು ತಾವೇ ಸಭೆಯ ದಿನಾಂಕ, ಸಮಯ ನಿಗದಿ ಮಾಡಿದ್ದರೂ ಏಕೆ ಬರಲಿಲ್ಲ. ಅಂದು ಬರದೆ ಇದ್ದರೆ ಬೇರೆ ದಿನವಾದರೂ ಸಭೆ ನಿಗದಿ ಮಾಡಬೇಕಿತ್ತು. ಅದನ್ನು ಸಹ ಶಾಸಕರು ಮಾಡಿಲ್ಲವೆಂದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಕೊಪ್ಪಳ ಬಳಿ ತಲೆ ಎತ್ತಲಿರುವ ಬಿಎಸ್‌ಪಿಎಲ್ ಕಾರ್ಖಾನೆಯನ್ನು ಇಲ್ಲಿಂದ ತೊಲಗಿಸಬೇಕು. ಆದರೆ, ಬೃಹತ್ ಹೋರಾಟದ ನಂತರ ಜನಪ್ರತಿನಿಧಿಗಳಿಗೆ ವಹಿಸಿದ್ದ ಜವಾಬ್ದಾರಿ ಏನಾಯಿತು ಎಂದು ಈ ವರೆಗೂ ಹೋರಾಟಗಾರರಿಗೆ ತಿಳಿಸಿಲ್ಲ. ಈ ಕುರಿತು ಚರ್ಚಿಸಲು ಕರೆದಿದ್ದ ಸಭೆಗೂ ಬರದೆ, ಸಮಯ ಮೀರಿದ ಮೇಲೆ ಬರುವುದಾಗಿ ಹೇಳುತ್ತಾರೆ. ಕೊಪ್ಪಳವನ್ನೇ ಎತ್ತಂಗಡಿ ಮಾಡುವಂತಹ ಸ್ಥಿತಿ ಬಂದೊದಗುತ್ತದೆ. ಅಂಥ ಮಹತ್ವದ ವಿಷಯದ ಕುರಿತು ಹೋರಾಟಗಾರರೊಂದಿಗೆ ಏಕೆ ಶಾಸಕರು ಚರ್ಚೆಗೆ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಕಾರ್ಖಾನೆ ವಿರುದ್ಧ ಹೋರಾಟದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹೋರಾಟಗಾರರಿಗೆ ಸಾಥ್‌ ನೀಡಬೇಕು. ಇಲ್ಲದಿದ್ದರೇ ಬಿಎಸ್‌ಪಿಎಲ್ ಇಲ್ಲಿಯೇ ತಳವೂರುವ ಸಾಧ್ಯತೆ ಇದೆ. ಇದನ್ನು ತಡೆಯುವ ದಿಸೆಯಲ್ಲಿ ಪ್ರಯತ್ನ ಆಗಬೇಕು ಎಂದಿದ್ದಾರೆ.ನಾನು ಸಭೆಗೆ ಹೋಗಬಾರದು ಎನ್ನುವ ಕಾರಣಕ್ಕೆ ಬಿಟ್ಟಿಲ್ಲ. ಹಾಲು ಒಕ್ಕೂಟದ ಚುನಾವಣೆ ಕುರಿತು ಪಕ್ಷದ ಮುಖಂಡರ ಸಭೆ ಇದ್ದಿದ್ದರಿಂದ ತಡವಾಯಿತು. ನಾನೇ ಅವರಿಗೆ ಕರೆ ಮಾಡಿ ಮಾತನಾಡಿಸಿದ್ದೇನೆ. ಅವರೆಲ್ಲರನ್ನು ನಾನೇ ಕರೆದು, ಶೀಘ್ರದಲ್ಲಿಯೇ ಮತ್ತೊಮ್ಮೆ ಸಭೆ ಮಾಡುತ್ತೇನೆ.

ರಾಘವೇಂದ್ರ ಹಿಟ್ನಾಳ ಶಾಸಕ

ಶಾಸಕರೇ ನಿಗದಿ ಮಾಡಿದ್ದ ಸಮಯಕ್ಕೆ ಸರಿಯಾಗಿ ನಾವೆಲ್ಲರೂ ಸೇರಿದ್ದೇವು. ಆದರೂ ಅವರು ಬರಲೇ ಇಲ್ಲ. ಇದು ಹೋರಾಟಗಾರರಿಗೆ ಮಾಡಿದ ಅಪಮಾನವಾಗಿದೆ. ತದನಂತರವಾದರು ಸಭೆ ನಿಗದಿ ಮಾಡದೆ ಇರುವುದು ನಮ್ಮೆಲ್ಲರ ಆಕ್ರೋಶಕ್ಕೆ ತುತ್ತಾಗಿದೆ.

ಅಲ್ಲಮಪ್ರಭು ಬೆಟ್ಟದೂರು ಹೋರಾಟಗಾರರು