ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕ್ಲಾಸಿಗೆ ಚಕ್ಕರ್ ಹೊಡೆದರೆ, ಇಲ್ಲಿ ಮಾತ್ರ ಶಿಕ್ಷಕರೇ ಚಕ್ಕರ್ ಹೊಡಿತಾರೆ. ಮಕ್ಕಳಿಗೆ ಪಾಠ ಪ್ರವಚನವನ್ನೇ ನಡೆಸಲ್ಲ. ಈ ಬಗ್ಗೆ ವಿಚಾರಣೆ ನಡೆಸಿ..!
ಇದು ನಗರದ ಹೊರವಲಯದ ತಾರಿಹಾಳದಲ್ಲಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಥೆ ವ್ಯಥೆ. ಈ ಸಂಬಂಧ ಈಗಾಗಲೇ ಇಲ್ಲಿನ ಜನಪ್ರತಿನಿಧಿಗಳಷ್ಟೇ ಅಲ್ಲದೇ, ವಿದ್ಯಾರ್ಥಿಗಳೂ ತಾಂತ್ರಿಕ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರಿಂದ, ಇದೀಗ ಇಲಾಖೆ ವಿಚಾರಣೆ ಆರಂಭಿಸಿದೆ.ಶಿಕ್ಷಕರಿಂದಲೇ ಚಕ್ಕರ್:
ತಾರಿಹಾಳ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 220ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. 24 ಜನ ಬೋಧಕರು, 42 ಜನ ಬೋಧಕೇತರ ಸಿಬ್ಬಂದಿಗಳಿದ್ದು, ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಇದೆ. ಆದರೆ ಇಲ್ಲಿನ ಬೋಧಕ ಸಿಬ್ಬಂದಿ ಸರಿಯಾಗಿ ತರಗತಿಗಳನ್ನೇ ತೆಗೆದುಕೊಳ್ಳುವುದಿಲ್ಲವಂತೆ. ತರಗತಿಗಳಿಗೆ ಅವರೇ ಚಕ್ಕರ್ ಹೊಡೆಯುತ್ತಾರೆ ಎಂಬ ಆರೋಪ ಸಾಮಾನ್ಯವಾಗಿದೆ.ಹಾಗಂತ ಕಾಲೇಜಿಗೆ ಬರಲ್ಲ ಅಂತೇನೂ ಇಲ್ಲ, ಬರುತ್ತಾರಂತೆ. ಬಯೋಮೆಟ್ರಿಕ್‌ನಲ್ಲಿ ತಮ್ಮ ಹಾಜರಾತಿಯನ್ನೂ ದಾಖಲಿಸುತ್ತಾರಂತೆ. ಆದರೆ ತರಗತಿಗಳನ್ನು ಮಾತ್ರ ಸರಿಯಾಗಿ ತೆಗೆದುಕೊಳ್ಳುವುದಿಲ್ಲವಂತೆ. ಸ್ಟಾಫ್ ರೂಮಿನಲ್ಲೋ, ಬೇರೆ ಎಲ್ಲಿಯಾದರೂ ಕುಳಿತು ಟೈಂಪಾಸ್ ಮಾಡ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ವಿದ್ಯಾರ್ಥಿಗಳೇ ದೂರುತ್ತಿದ್ದಾರೆ. ಮಕ್ಕಳಿಗೆ ಸರಿಯಾಗಿ ಪಾಠ ಪ್ರವಚನ ಕೂಡ ನಡೆಯದೇ ನಮ್ಮ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದ್ದಾರೆ.ಶಾಸಕರ ಪತ್ರ:
ಗ್ರಾಮಸ್ಥರ ದೂರನ್ನು ಅನುಸರಿಸಿ ಶಾಸಕ ಅರವಿಂದ ಬೆಲ್ಲದ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗೆ ಪತ್ರ ಬರೆದು ಈ ಬಗ್ಗೆ ತನಿಖೆ ನಡೆಸಬೇಕು. ಸರಿಯಾಗಿ ಪಾಠ ಪ್ರವಚನ ನಡೆಯುವಂತೆ ನೋಡಿಕೊಳ್ಳಬೇಕು. ತರಗತಿಗಳಿಗೆ ಚಕ್ಕರ್ ಹೊಡೆಯುವ ಶಿಕ್ಷಕರ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದ್ದುಂಟು.ಇದಕ್ಕೆ ಇಲಾಖೆಯ ಆಯುಕ್ತರು ಪ್ರಾಂಶುಪಾಲರಿಗೆ ಕೇಳಿ ಆಗಿದೆ. ಆದರೆ ಪ್ರಯೋಜನ ಮಾತ್ರ ಶೂನ್ಯ. ಈಗಲೂ ಅದೇ ಪರಿಸ್ಥಿತಿ ಇದೆ ಎಂದು ಪಾಲಕರ ಆಪಾದನೆ.
ಆಡಳಿತಾಧಿಕಾರಿ ನೇಮಿಸಿ:ಇದೀಗ ಕಾಲೇಜಿಗೆ ಆಡಳಿತಾಧಿಕಾರಿ ನೇಮಿಸಬೇಕು. ಪ್ರತಿ ಬೋಧಕ ಸಿಬ್ಬಂದಿ ಎಷ್ಟು ತರಗತಿಗಳನ್ನು ನಡೆಸುತ್ತಾರೆ. ಪಠ್ಯಕ್ರಮವನ್ನು ಪೂರ್ಣಗೊಳಿಸುತ್ತಾರೋ ಇಲ್ಲವೋ, ಪ್ರ್ಯಾಕ್ಟಿಕಲ್ ಸರಿಯಾಗಿ ನಡೆಯುತ್ತದೆಯೋ ಇಲ್ಲವೋ ಎಂಬುದನ್ನು ನಿರಂತರವಾಗಿ ಪರಿಶೀಲಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಈ ನಡುವೆ ಇಲ್ಲಿನ ಸಿಬ್ಬಂದಿ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆಲ್ಲ ಕಾರಣವಂತೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲವಂತೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಲ್ಲಿ ಎರಡ್ಮೂರು ಗುಂಪುಗಳಾಗಿವೆ. ಇವರ ನಡುವಿನ ತಿಕ್ಕಾಟದಿಂದಾಗಿ ಅತ್ತ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಇತ್ತ ಆಡಳಿತವೂ ಸರಿಯಾಗಿ ಆಗುತ್ತಿಲ್ಲ ಎಂಬುದು ಹಿರಿಯ ಬೋಧಕ ಸಿಬ್ಬಂದಿಯೊಬ್ಬರ ಅಂಬೋಣ.ಲಕ್ಷಗಟ್ಟಲೇ ಸಂಬಳ ಪಡೆಯುವ ಸಿಬ್ಬಂದಿಯೇ ಈ ರೀತಿ ಮಾಡಿದರೆ ಮಕ್ಕಳ ಭವಿಷ್ಯ ಏನಾಗಬೇಡ?
ತಾರಿಹಾಳದಲ್ಲಿನ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ದೂರು ಬಂದಿದ್ದವು. ಈ ಬಗ್ಗೆ ಇಲಾಖೆ ಆಯುಕ್ತರಿಗೆ ಪತ್ರ ಕೂಡ ಬರೆದು ತಿಳಿಸಿದ್ದೆ. ಮಕ್ಕಳ ಭವಿಷ್ಯ ಅಡಗಿರುವುದರಿಂದ ಅಲ್ಲಿನ ಪರಿಸ್ಥಿತಿ ಸುಧಾರಿಸಲು ಇಲಾಖೆ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.ತಾರಿಹಾಳ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲವೆಂದರೆ ಪರಿಶೀಲಿಸಿ ತನಿಖೆ ನಡೆಸಲಾಗುವುದು.
ಎಂದು ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ ತಿಳಿಸಿದ್ದಾರೆ.