ಸ್ಟೋರಿ..ಬರದ ನಡುವೆಯೂ ಬರಪೂರ ಸಸ್ಯ ಪೋಷಣೆ!

KannadaprabhaNewsNetwork | Published : Jun 6, 2024 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಬರ, ನೀರಿನ ಕೊರತೆ ನಡುವೆಯೂ ತಾಲೂಕಿನ ಜೇವೂರ ನರ್ಸರಿ(ಸಾಲುಮರ ತಿಮ್ಮಕ್ಕ ಉದ್ಯಾನ) 30 ಸಾವಿರ ವಿವಿಧ ಜಾತಿ ಸಸಿಗಳನ್ನು ಬೆಳೆಸಲಾಗಿದೆ. ಈ ಮೂಲಕ ರೈತರಿಗೆ ನೀಡಿ, ವಿವಿಧೆಡೆ ಬೆಳೆಸಲು ಪ್ರಾದೇಶಿಕ ಅರಣ್ಯ ಇಲಾಖೆ ಸಜ್ಜಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಬರ, ನೀರಿನ ಕೊರತೆ ನಡುವೆಯೂ ತಾಲೂಕಿನ ಜೇವೂರ ನರ್ಸರಿ(ಸಾಲುಮರ ತಿಮ್ಮಕ್ಕ ಉದ್ಯಾನ) 30 ಸಾವಿರ ವಿವಿಧ ಜಾತಿ ಸಸಿಗಳನ್ನು ಬೆಳೆಸಲಾಗಿದೆ. ಈ ಮೂಲಕ ರೈತರಿಗೆ ನೀಡಿ, ವಿವಿಧೆಡೆ ಬೆಳೆಸಲು ಪ್ರಾದೇಶಿಕ ಅರಣ್ಯ ಇಲಾಖೆ ಸಜ್ಜಾಗಿದೆ.

ಭೀಕರ ಬರಕ್ಕೆ ಜಲಪಾತಗಳು ಬತ್ತಿವೆ, ನದಿ, ಹಳ್ಳಗಳು ಒಣಗಿವೆ. ನೀರಿಗಾಗಿ ಜೀವರಾಶಿ ಬಿಕ್ಕುತ್ತಿವೆ. ಬಿಸಿಲಿಗೆ ಬೆಂದು ಬೆಂಡಾಗಿರುವ ರೈತರ ಬೆಳೆಗಳು ಒಣಗಿವೆ. ಜನವಸತಿ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸುತ್ತಿರುವ ತಾಲೂಕು ಆಡಳಿತ. ಇಷ್ಟೇಲ್ಲ ಸಮಸ್ಯೆ ಇದ್ದರೂ ಮಳೆಯ ಕೊರತೆಯಿಂದ ಭೀಕರ ಬರಗಾಲಕ್ಕೆ ಹೆಸರುವಾಸಿಯಾಗಿರುವ ಗಡಿಭಾಗದ ಇಂಡಿ ತಾಲೂಕಿನ ಜೇವೂರ ಗ್ರಾಮದ ಬಳಿಯ ನರ್ಸರಿಯಲ್ಲಿ (ಸಸ್ಯಕ್ಷೇತ್ರ) ಅರಣ್ಯಪ್ರದೇಶಲ್ಲಿ ಅರಣ್ಯ ಇಲಾಖೆಯಿಂದ ಬರ ಅಳಿಸುವ ಕಾಳಜಿ ಸದ್ದಿಲ್ಲದೆ ನಡೆದಿದೆ.

19 ಹೆಕ್ಟೇರ್‌ ಪ್ರದೇಶ:

ತಾಲೂಕಿನಲ್ಲಿ ಕಡಿಮೆ ಮಳೆ ಬೀಳುವ ಕಾರಣ ಗಡಿಭಾಗದ ಇಂಡಿ ತಾಲೂಕು ಬರಪೀಡಿತ ಪ್ರದೇಶ ಎಂದು ಸರ್ಕಾರ ಪ್ರತಿ ವರ್ಷ ಘೋಷಿಸುತ್ತಲೆ ಬಂದಿದೆ. ತಾಲೂಕಿನ ಜೇವೂರ ನರ್ಸರಿ 19 ಹೆಕ್ಟೇರ್‌ ಪ್ರದೇಶವನ್ನು ಹೊಂದಿದೆ. ತಾಲೂಕಿನಲ್ಲಿ ಬರ ಅಳಿಸುವ ಉದ್ದೇಶದಿಂದ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಸಿಗಳನ್ನು ಬೆಳೆಸಿ ವಿತರಿಸುವ ಕೆಲಸ ಮಾಡುತ್ತಿದ್ದಾರೆ.

ಕಡಿಮೆ ದರದಲ್ಲಿ ವಿತರಣೆ:

ಕುಡಿಯಲು ನೀರು ಸಿಗದ ಈ ದಿನದಲ್ಲಿ ಜೇವೂರ ನರ್ಸರಿಯಲ್ಲಿ ರೈತರಿಗೆ ಕಡಿಮೆ ದರದಲ್ಲಿ ಸಸಿಗಳನ್ನು ವಿತರಿಸಲು 11 ಸಾವಿರ ಹಾಗೂ ಸರ್ಕಾರಿ ಜಾಗದಲ್ಲಿ ಸಸಿಗಳನ್ನು ಹಚ್ಚಲು 19 ಸಾವಿರ ಒಟ್ಟು 30 ಸಾವಿರ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿರುವುದು ಶ್ಲಾಘನಿಯ ಸಂಗತಿ. ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಿ ರಿಯಾಯಿತಿ ದರದಲ್ಲಿ ₹3 ಹಾಗೂ ₹6 ದರದಲ್ಲಿ ವಿತರಿಸಲು ಇಂಡಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಮುಂದಾಗಿದೆ. ಜೇವೂರ ನರ್ಸರಿಯಲ್ಲಿ ರೈತರಿಗೆ ಕಡಿಮೆ ದರದಲ್ಲಿ ವಿತರಿಸಲು ಲಿಂಬೆ, ನೆರಳೆ, ರಕ್ತ ಚಂಚನ, ಮಹಾಗನಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ.

ಸರ್ಕಾರಿ ಜಾಗದಲ್ಲಿ, ರಸ್ತೆ ಬದಿಯಲ್ಲಿ ಇಲಾಖೆಯಿಂದ ಸಸಿಗಳನ್ನು ನೆಡಲು ಬೇವು, ಹೊಂಗೆ, ಬಸರಿ,ಆಲ,ಅರಳಿ ಹಾಗೂ ಸಂಕೇಶ್ವರ ಸಸಿಗಳನ್ನು ಬೆಳೆಸಲಾಗಿದೆ.

----

ಬಾಕ್ಸ್‌

ಸಾಲುಮರದ ತಿಮ್ಮಕ್ಕ ಹೆಸರು

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನ ಎಂದು ಹೆಸರಿಸಿ, ಜೇವೂರ ನರ್ಸರಿಯಲ್ಲಿ ನಿರ್ಮಿಸಿದ ಉದ್ಯಾನವನದಲ್ಲಿ ಪ್ಯಾರಾಗೋಲ, ಮಕ್ಕಳ ಆಟಿಕೆಗಳು, ಪ್ರವಾಸಿಗರಿಗೆ ಕುಳಿತು ಭೋಜನ ಮಾಡಲು ಭೋಜನ ಕೋಣೆ, ವಾಟರ್‌ ಟ್ಯಾಂಕ್‌, ವಾಕಿಂಗ್‌ ಪಥ (ಹಿರಿಯ ನಾಗರಿಕರಿಗಾಗಿ ವಾಕಿಂಗ್‌ ರಸ್ತೆ) ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಂಡು ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ.

---

ಸಸಿಗಳಿಗೆ ನೀರಿಗಾಗಿ ಎರಡು ಕೃಷಿ ಹೊಂಡ

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂಬ ಉದ್ದೇಶದಿಂದ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಜೇವೂರ ನರ್ಸರಿಯಲ್ಲಿ ಎರಡು ದೊಡ್ಡ ಪ್ರಮಾಣದ ಕೃಷಿ ಹೊಂಡಗಳನ್ನು ನಿರ್ಮಿಸಿದ್ದಾರೆ. ನರ್ಸರಿಯಲ್ಲಿ ತೊಡಿದ ಬೋರ್‌ವೆಲ್‌ದಲ್ಲಿ ಸಣ್ಣಪ್ರಮಾಣದಲ್ಲಿ ಬರುವ ನೀರನ್ನು ಕೃಷಿಹೊಂಡದಲ್ಲಿ ತುಂಬಿಸಿ ಸಸಿಗಳಿಗೆ ನೀರುಣಿಸಲಾಗುತ್ತಿದೆ.

---

ಸಸಿ ಬೇಕಾದಲ್ಲಿ ಇಲ್ಲಿಗೆ ಸಂಪರ್ಕಿಸಿ

ತಾಲೂಕಿನ ಜೆವೂರ ನರ್ಸರಿಯಲ್ಲಿ ವಿವಿಧ ಜಾತಿಯ ಸಸಿಗಳು ಲಭ್ಯವಿದ್ದು, ಆಸಕ್ತರು ಆಧಾರ್‌ ಕಾರ್ಡ್‌, ಜಮೀನ ಉತಾರೆ ನೀಡಿ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಇಂಡಿ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

---

ಮಳೆ ಇಲ್ಲದೇ ಬರಕ್ಕೆ ತತ್ತರಿಸಿದ ತಾಲೂಕಿನಲ್ಲಿ ಸಾವಿರ ಫ್ಯೂಟ್‌ ಆಳದಲ್ಲಿ ಬೋರ್‌ವೆಲ್‌ ಕೊರೆಯಿಸಿದರೂ ನೀರು ಬಾರದೇ ಇರುವ ದಿನಮಾನದಲ್ಲಿಯೂ ಕಡಿಮೆ ಅವಧಿಯಲ್ಲಿ ಜೇವೂರ ನರ್ಸರಿಯಲ್ಲಿ 30 ಸಾವಿರ ವಿವಿಧ ಜಾತಿಯ ಸಸಿ ಬೆಳೆಸಲಾಗಿದೆ. ಇಲಾಖೆಯ ಸಿಬ್ಬಂದಿ ಹಾಗೂ ದಿನಗೂಲಿಗಳ ಶ್ರಮ ಇದರಲ್ಲಿ ಅಡಗಿದೆ. ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುವುದು.

-ಎ.ಎಸ್.ಪಾಕೆ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ, ಇಂಡಿ.

Share this article