ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿರುದ್ಧ ಫೇಸ್‌ಬುಕ್‌ನಲ್ಲಿ ನಿಂದನಾತ್ಮಕ ಪೋಸ್ಟ್ ಬರೆದ ವ್ಯಕ್ತಿಯ ವಿರುದ್ಧ ಸುಮೊಟೊ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾಲಯದ ಬಿ ಗೇಟ್ ಮೂಲಕ ಪ್ರತಿಭಟನೆ ಆರಂಭಿಸಿದ ಸಂಶೋಧನಾ ವಿದ್ಯಾರ್ಥಿಗಳು ಕ್ರಿಯಾಶಕ್ತಿ ಕಟ್ಟಡದ ವರೆಗೆ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.ಕನ್ನಡ ವಿಶ್ವವಿದ್ಯಾಲಯದ ಘನತೆ, ಗೌರವಕ್ಕೆ ಧಕ್ಕೆ ತರುವ ಆರೋಪ ಮಾಡಲಾಗಿದೆ. ಈ ಆರೋಪ ಸತ್ಯಕ್ಕೆ ದೂರವಾಗಿದ್ದು, ಅತ್ಯಂತ ಕೀಳುಮಟ್ಟದಿಂದ ಕೂಡಿದೆ. ಅಂಥವರನ್ನು ಸಹಿಸಿಕೊಂಡರೆ ವಿಶ್ವವಿದ್ಯಾಲಯದ ಮೇಲೆ ಇನ್ನಷ್ಟು ಈ ತರಹದ ದಾಳಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಭಟನಾಕಾರರು ದೂರಿದರು.
ಕನ್ನಡ ವಿಶ್ವವಿದ್ಯಾಲಯವನ್ನು ನಕ್ಸಲರನ್ನು ಸೃಷ್ಟಿ ಮಾಡುವ ಕೇಂದ್ರ ಎಂದು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತಂದಿರುವ ಕನ್ನಡ ವಿರೋಧಿತನ ತೋರಿದ ವ್ಯಕ್ತಿಯ ವಿರುದ್ಧ ಕೂಡಲೇ ಸರ್ಕಾರ ಸುಮೊಟೊ ಕೇಸ್ ದಾಖಲಿಸಿ, ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಇಂತಹ ದಾಳಿಗಳನ್ನು ತಡೆಯಲು ಬೇಕಾದ ಕಾರ್ಯತಂತ್ರವನ್ನು ವಿಶ್ವವಿದ್ಯಾಲಯ ರೂಪಿಸಬೇಕು. ಕನ್ನಡ ವಿಶ್ವವಿದ್ಯಾಲಯದ ಸಂಶೋಧಕರ ಮೇಲೆ ಆಗುತ್ತಿರುವ ಇಂತಹ ದಾಳಿಗಳನ್ನು ತಡೆದು ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಬೇಕು. ಈ ಕೂಡಲೇ ನಿಂದನಾತ್ಮಕ ಪೋಸ್ಟ್ ಬರೆದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಂಶೋಧನಾರ್ಥಿಗಳಾದ ಡಾ. ಸಂದೀಪ್, ವಿರೂಪಾಕ್ಷಿ, ಬಸವರಾಜ್, ಮಣಿಕಂಠ, ಹನುಮಂತರಾಯ, ಗಿರೀಶ್ ಕುಮಾರ್ ಗೌಡ, ರಾಹುಲ್, ಲಕ್ಷ್ಮಣ, ಆಶಾ, ಜಿ.ಬಿ. ಸಾವಿತ್ರಿ, ಉಮಾ ಮತ್ತಿತರರಿದ್ದರು.