ಹಾಸನಾಂಬೆ ದೇವಾಲಯ ಸುತ್ತಲಿನ ನಿವಾಸಿಗಳ ಪರದಾಟ

KannadaprabhaNewsNetwork | Published : Nov 5, 2023 1:15 AM

ಸಾರಾಂಶ

ಹಾಸನಾಂಬೆ ದೇವಾಲಯದ ಸುತ್ತ ಬ್ಯಾರಿಕೇಡ್‌ ಹಾಕಿ ಯಾರು ಓಡಾಡದಂತೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ಮನೆಗೆ ಹೋಗಲಿಕ್ಕೂ ಕೂಡ ಪೊಲೀಸರು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉತ್ಸವ ಮುಗಿಯುವವರೆಗೆ ಎಲ್ಲಾದರೂ ಹೋಗಿ ಎನ್ನುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು

ಹಾಸನ: ಹಾಸನಾಂಬೆ ದೇವಾಲಯದ ಸುತ್ತ ಬ್ಯಾರಿಕೇಡ್‌ ಹಾಕಿ ಯಾರು ಓಡಾಡದಂತೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ಮನೆಗೆ ಹೋಗಲಿಕ್ಕೂ ಕೂಡ ಪೊಲೀಸರು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉತ್ಸವ ಮುಗಿಯುವವರೆಗೆ ಎಲ್ಲಾದರೂ ಹೋಗಿ ಎನ್ನುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.

ವರ್ಷಕ್ಕೊಮ್ಮೆ ಹಾಸನಾಂಬೆ ದೇವಾಲಯದ ಬಾಗಿಲು ತೆಗೆಯುತ್ತಾರೆ. ಆದರೇ ನಮಗೆ ದರ್ಶನ ಮಾಡಲು ಅವಕಾಶ ಕೊಡುವುದಿಲ್ಲ. ಹೊರಗೆ ಬರುವವರಿಗೆ ಹೇಗೆ ದರ್ಶನ ಕೊಡುತ್ತಾರೆ. ೧೫ ದಿನ ಬಾಗಿಲು ತೆಗೆದರೇ ಇವರು ಒಂದು ತಿಂಗಳ ಮೊದಲೆ ನಾವು ಓಡಾಡುವ ಜಾಗ ಬಂದ್ ಮಾಡುತ್ತಾರೆ. ಕೇಳಿದರೇ ನಾವು ಏನು ತೀರ್ಮಾನ ಮಾಡುತ್ತೇವೆ ಅದನ್ನು ಪಾಲಿಸಬೇಕು. ನಿಮಗೆ ಸಮಸ್ಯೆ ಆದ್ರೆ ಒಂದು ತಿಂಗಳು ಮನೆ ಬಿಟ್ಟು ಹೊರಗೆ ಹೋಗಿ, ಸಾರಿಗೆ ಬಸ್ ಕೂಡ ಉಚಿತ ಇದೆ. ಎಲ್ಲಾದರೂ ಸುತ್ತಾಡಿಕೊಂಡು ಬನ್ನಿ ಎನ್ನುವ ಸಲಹೆ ನೀಡುತ್ತಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಇದು ನಮ್ಮದು ಜಾಗ ಮನೆ ಬಿಟ್ಟು ನಾವು ಎಲ್ಲಿಗೆ ಹೋಗಬೇಕು? ಸ್ಥಳೀಯರಿಗೆ ಜಾಗ ಇಲ್ಲ ಎಂದ ಮೇಲೆ ಹೊರಗಿನವರನ್ನು ಏಕೆ ಕರೆಯಿಸಬೇಕು. ಪ್ರತಿಯೊಂದಕ್ಕೂ ದುಡ್ಡು ವಿಧಿಸುತ್ತಿದ್ದಾರೆ. ಇವರಿಗೆ ದರ್ಶನಕ್ಕಿಂತ ಹಣದ ಕಡೆ ಹೆಚ್ಚಿನ ಗಮನ ನೀಡಿದ್ದಾರೆ ಎಂದು ದೂರಿದರು.

ಎಸಿ ಹೆಚ್ಚಿನ ರೂಲ್ಸ್ ತಂದಿದ್ದು, ನಾವು ಒಳ್ಳೆ ಅಧಿಕಾರಿ ಎನಿಸಿಕೊಳ್ಳಬೇಕೆಂದು ಇಂತಹ ಕಠಿಣ ಕಾನೂನು ಬೇಡ. ಒಳ್ಳೆಯ ಅಧಿಕಾರಿ ಆಗಲಿ ನಮಗೂ ಸಂತೋಷ. ಇನ್ನೊಬ್ಬರಿಗೆ ತೊಂದರೆ ನೀಡಿ ಈ ರೀತಿ ನಡೆದುಕೊಳ್ಳುವುದು ಬೇಡ ಎಂದರು.

ಐಪಿಗಳು ಬರುತ್ತಾರೆ ಎಂದು ಹಳೆ ಮನೆಯನ್ನು ಕಟೌಟ್ ಮೂಲಕ ಮುಚ್ಚಿ ಹಾಕಿದ್ದಾರೆ. ವಿಐಪಿಗಳು ಹಳೆ ಮನೆಯಲ್ಲಿ ಹುಟ್ಟಿ ಬೆಳೆದಿಲ್ಲವೇ? ಯಾವ ವರ್ಷವೂ ಈ ರೀತಿ ಸಮಸ್ಯೆ ಆಗಿರಲಿಲ್ಲ. ನಮ್ಮ ಮನೆಗಳಲ್ಲಿ ವಯಸ್ಸಾದವರು ಇದ್ದು, ಅವರು ಶುಗರ್ ಹಾಗೂ ಇತರೆ ಖಾಯಿಲೆಯ ಬಳಲುತ್ತಿದ್ದಾರೆ. ದಿನನಿತ್ಯ ಆಸ್ಪತ್ರೆಗೆ ಹೋಗಿ ಬರಬೇಕು. ಬಿಟ್ಟಿರುವ ಅಲ್ಪಸಲ್ಪ ಜಾಗದಲ್ಲಿ ನಾವು ಹೇಗೆ ಓಡಾಡುವುದು. ಗುಂಡಿ ಬೇರೆ ಇದೆ ಎಂದರು.

--

ಬಾಕ್ಸ್

ಹಿರಿಯ ನಾಗರಿಕರಿಗೆ ನೇರದರ್ಶನವಿಲ್ಲ!

ಈ ಬಾರಿ ವಯಸ್ಸಾದವರಿಗೆ ನೇರ ದರ್ಶನ ಕೂಡ ಇರುವುದಿಲ್ಲ. ಅವರು ಏನು ಮಾಡಬೇಕು? ಮನಸ್ಸು ಮಾಡಿದರೇ ಹಾಕಲಾಗಿರುವ ಕಟೌಟ್ ಕಿತ್ತು ಬಿಸಾಕಲು ಎಷ್ಟು ಸಮಯ ಬೇಕು? ನಾವು ಅಧಿಕಾರಿಗಳ ರೂಲ್ಸ್ ಫಾಲೋ ಮಾಡಲು ಸುಮ್ಮನಿದ್ದೇವೆ ಅಷ್ಟೆ ಎಂದರು.

Share this article