ಆರೋಗ್ಯ ರಕ್ಷಿಸುವ ಪೌರ ಕಾರ್ಮಿಕರ ನಿಂದನೆ ಸಲ್ಲ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

KannadaprabhaNewsNetwork |  
Published : Sep 24, 2025, 01:00 AM IST
23ಕೆಡಿವಿಜಿ2, 3-ದಾವಣಗೆರೆ ಪಾಲಿಕೆಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರಿಗೆ ಜಿಲ್ಲಾಧಿಕಾರಿ, ಜಿಪಂ ಸಿಇಓ, ಪಾಲಿಕೆ ಆಯಕ್ತರು ಸನ್ಮಾನಿಸಿದರು. | Kannada Prabha

ಸಾರಾಂಶ

ಊರಿನ ಸ್ವಚ್ಛತೆ ಜತೆಗೆ ಜನಾರೋಗ್ಯ ಕಾಪಾಡಲು ತಮ್ಮ ವೈಯಕ್ತಿಕ ಬದುಕು, ಆರೋಗ್ಯವನ್ನೂ ಲೆಕ್ಕಿಸದೇ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ನಿಂದಿಸುವ ಕೆಲಸವು ಕೆಲವರಿಂದ ಆಗುತ್ತಿದ್ದು, ಅಂತಹ ಘಟನೆಗಳು ಮೊದಲು ನಿಲ್ಲಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಊರಿನ ಸ್ವಚ್ಛತೆ ಜತೆಗೆ ಜನಾರೋಗ್ಯ ಕಾಪಾಡಲು ತಮ್ಮ ವೈಯಕ್ತಿಕ ಬದುಕು, ಆರೋಗ್ಯವನ್ನೂ ಲೆಕ್ಕಿಸದೇ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ನಿಂದಿಸುವ ಕೆಲಸವು ಕೆಲವರಿಂದ ಆಗುತ್ತಿದ್ದು, ಅಂತಹ ಘಟನೆಗಳು ಮೊದಲು ನಿಲ್ಲಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕೆಲವು ಸಾರ್ವಜನಿಕರು ಪೌರ ಕಾರ್ಮಿಕರಿಗೆ ನಿಂದಿಸುತ್ತಿದ್ದು, ಅಂತಹವರು ಇನ್ನಾದರೂ ತಮ್ಮ ವರ್ತನೆ ತಿದ್ದಿಕೊಳ್ಳಬೇಕು ಎಂದರು.

ಪೌರ ಕಾರ್ಮಿಕರು ನಿರ್ಭೀತಿಯಿಂದ ಕೆಲಸ ಮಾಡಬೇಕು. ಸಾರ್ವಜನಿಕರಿಂದ ಪೌರ ಕಾರ್ಮಿಕರಿಗೇನಾದರೂ ತೊಂದರೆಯಾದರೆ ತಕ್ಷಣವೇ ನನ್ನ ಗಮನಕ್ಕೆ ತನ್ನಿ. ನೀವು ನಿರ್ಭೀತಿಯಂದ ಕೆಲಸ ಮಾಡಬೇಕು. ಸಾರ್ವಜನಿಕರು, ಅಧಿಕಾರಿಗಳಿಂದ ತೊಂದರೆಯಾದರೆ ನನ್ನ ಗಮನಕ್ಕೆ ತಂದರೆ, ತಕ್ಷಣ ಅದನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.

ಬೆಳಿಗ್ಗೆ ತಿಂಡಿ ತಿಂದ ನಂತರ ಕೈತೊಳೆಯಲು ಸಹ ಪೌರ ಕಾರ್ಮಿಕರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಹಲವಾರು ಸಮಸ್ಯೆಗಳು ಪೌರ ಕಾರ್ಮಿಕರಿಗೂ ಇವೆ. ವಾರದಲ್ಲಿ ಮೂರು ದಿನ ವಿವಿಧ ಕಡೆಗೆ ನಾವೇ ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸುತ್ತಿದ್ದೇವೆ. ಪೌರ ಕಾರ್ಮಿಕರ ಸಮಸ್ಯೆ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಬಳಿ ಚರ್ಚಿಸಿದ್ದೇವೆ ಎಂದು ತಿಳಿಸಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್ ಮಾತನಾಡಿ, ಪೌರ ಕಾರ್ಮಿಕರ ಸಹಭಾಗಿತ್ವ ಇದ್ದಾಗ ಮಾತ್ರವೇ ಊರಿನ ಸಮಗ್ರ ಅಭಿವೃದ್ಧಿ ಸಾಧ್ಯ. ನಗರ ಸ್ವಚ್ಛವಾಗಿಡುವುದೆಂದರೆ ಕಚೇರಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡು, ಕೆಲಸ ಮಾಡುವಷ್ಟು ಸುಲಭವಲ್ಲ. ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರು ನಿಸ್ವಾರ್ಥದಿಂದ ಸೇವೆ ನೀಡುತ್ತಿದ್ದಾರೆ. ಅಂತಹ ಪೌರ ಕಾರ್ಮಿಕರಿಗೆ ಸಮಾಜವೂ ಗೌರವಿಸುವುದನ್ನು ಕಲಿಯಬೇಕು. ಪೌರ ಕಾರ್ಮಿಕರ ಸೇವೆ ಮಹತ್ವದ ಬಗ್ಗೆ ನಮಗೆ ಅರಿವು ಇರಬೇಕು ಎಂದರು.

ಪಾಲಿಕೆ ಆಯುಕ್ತೆ ರೇಣುಕಾ, ಉಪ ಆಯುಕ್ತೆ ಮಂಜುಳಾ, ಮುಖ್ಯ ಲೆಕ್ಕಾಧಿಕಾರಿ ಡಿ.ಪ್ರಿಯಾಂಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ, ಎಸ್‌ಇ ಚೌಹಾಣ್, ಇಇ ಉದಯಕುಮಾರ, ಪರಿಸರ ಅಭಿಯಂತರರಾದ ಬಸವಣ್ಣ, ಶ್ರೀನಿವಾಸ, ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜ, ಎಸ್.ಕೆ.ಪಾಂಡುರಾಜ, ನಾಗರಾಜ, ಪೌರ ಕಾರ್ಮಿಕರ ಸಂಘಟನೆಗಳ ರಾಜ್ಯ ಮುಖಂಡರಾದ ಎಲ್.ಎಂ.ಹನುಮಂತಪ್ಪ, ಜಿಲ್ಲಾ ಮುಖಂಡರಾದ ಎನ್.ನೀಲಗಿರಿಯಪ್ಪ, ಎಲ್.ಡಿ.ಗೋಣೆಪ್ಪ, ಎಲ್.ಎಂ.ಎಚ್‌.ಸಾಗರ್‌, ಮಲ್ಲಿಕಾ ಗುಡಿಕೋಟೆ, ಸುನಿಲ್‌ಕಮಾರ, ರಾಘವೇಂದ್ರ, ಸಿ.ಎಂ.ಸಚಿನಕುಮಾರ, ಮದನ್ ಕುಮಾರ, ಮಾರುತಿ ಇತರರು ಇದ್ದರು. ಇದೇ ವೇಳೆ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.

ಸಮಯದ ಅಭಾವದಿಂದ ಪೌರ ಕಾರ್ಮಿಕರಿಗೆ ಸ್ಪಂದಿಸಲಾಗದೆ ಇರಬಹುದು. ಆದರೆ, ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ನಸುಕಿನಿಂದಲೇ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಿ. ತ್ಯಾಜ್ಯ ಎತ್ತುವಾಗ ಕೈಗೆ ಗ್ಲೌಸ್‌ ಬಳಸಿ, ಮುಖಕ್ಕೆ ಮಾಸ್ಕ್, ಕಾಲಿಗೆ ಶೂ ಹಾಕಿ ಕೆಲಸ ಮಾಡಿ. ದುಶ್ಚಟದಿಂದ ದೂರವಿರಿ. ದುಶ್ಚಟಕ್ಕೆ ಹಣ ಕಳಿಯದೇ, ಕುಟುಂಬಕ್ಕೆ ಸದ್ಭಳಕೆ ಮಾಡಿಕೊಳ್ಳಿ. ಪೌರ ಕಾರ್ಮಿಕರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ