ಮಡಿಕೇರಿ: ರಾಜ್ಯ ಸರ್ಕಾರ ಕೊಡಗು ವಿವಿಯನ್ನು ಮುಚ್ಚುವ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದಲ್ಲಿ ಕೊಡಗು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲಾ ವಿದ್ಯಾರ್ಥಿಗಳು ಸೇರಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಬಿ.ಸಿ.ಮಂದಾರ ಎಚ್ಚರಿಕೆ ನೀಡಿದ್ದಾರೆ.
ಕೊಡಗು ವಿಶ್ವವಿದ್ಯಾಲಯದಡಿಯಲ್ಲಿ ಸುಮಾರು 25 ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, 10 ಸಾವಿರ
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿಯೇ ವಿವಿ ಇದ್ದಾಗ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚಿನಆದ್ಯತೆ ದೊರೆಯುತ್ತದೆ. ಬೇರೆ ರಾಜ್ಯಕ್ಕೆ ತೆರಳುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ವಿವಿಯನ್ನು ಮುಚ್ಚುವ ನಿರ್ಧಾರವನ್ನು ಸರಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಕೇವಲ ಆರ್ಥಿಕ ಸಂಪನ್ಮೂಲ ಒದಗಿಸಲು ಸಾಧ್ಯವಾಗುವುದಿಲ್ಲ ಎನ್ನುವ ಆಧಾರದ ಮೇಲೆ ವಿವಿ ಮುಚ್ಚುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ವಿವಿಗಳಿಗೆ ಕಾಯಕಲ್ಪ ನೀಡಲು ಈ ಸಾಲಿನ ವಾರ್ಷಿಕ ಬಜೆಟ್‌ನಲ್ಲಿಯೇ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿ ಆಂದೋಲನ, ಪತ್ರ ಚಳುವಳಿ ಹಾಗೂ ವ್ಯಾಪಕ ಜನ ಜಾಗೃತಿಯನ್ನು ವಿದ್ಯಾರ್ಥಿ ಪರಿಷತ್ ವತಿಯಿಂದ ಮಾಡಲಾಗುವುದು. ಅಲ್ಲದೇ 9 ವಿವಿಗಳಿಗೂ ಪ್ರತ್ಯೇಕ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಉಳಿಸಿ ಕ್ರಿಯಾ ಸಮಿತಿ ರಚಿಸಿ ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನ ರೂಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿ.ಸಿ.ಮಂದಾರ ತಿಳಿಸಿದರು.ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಹೆಚ್.ಕೌಶಲ್ಯ, ಟಿ.ಡಿ.ಗಂಧರ್ವ, ವಿದ್ಯಾರ್ಥಿ ಪ್ರಮುಖ್ ಪ್ರಮೋದ್ ಪಲ್ಲೇದ್, ಜಿಲ್ಲಾ ಸಂಚಾಲಕ ಪಿ.ಎಸ್.ರೋಹಿತ್ ಹಾಗೂ ಮಡಿಕೇರಿ ತಾಲೂಕು ಸಂಚಾಲಕ ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು.