Cabinet Minister Dr. Ajay Dharam Singh visited the district to conduct a comprehensive study of the severe drought situation, drinking water scarcity, and crop damage; he held a meeting with all officials at the district's Agricultural University on Friday to gather information.

- ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ ಮಾಹಿತಿ

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿ, ಕುಡಿಯುವ ನೀರಿನ ಕೊರತೆ ಮತ್ತು ಬೆಳೆ ಹಾನಿಯ ಸಮಗ್ರ ಅಧ್ಯಯನಕ್ಕಾಗಿ ಸಂಪುಟ ಸಚಿವ ಡಾ.ಅಜಯ್ ಧರ್ಮಸಿಂಗ್ ಅವರು ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ ಮಾಹಿತಿ ಪಡೆದರು.

ಸಿಎಂ ನಿರ್ದೇಶನದಂತೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಸಚಿವರು, ಶುಕ್ರವಾರ ರಾಯಚೂರು ಗ್ರಾಮಾಂತರ, ದೇವದುರ್ಗ, ಲಿಂಗಸುಗೂರು ತಾಲೂಕುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಕೃಷಿ ವಿಶ್ವವಿದ್ಯಾಲಯದಲ್ಲಿ ಶಾಸಕರು, ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಹತ್ತಿ, ಭತ್ತ, ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿರುವುದಾಗಿ ವರದಿಯಾಗಿದೆ. ಅಂತರ್ಜಲ ಮಟ್ಟವು ಗಣನೀಯವಾಗಿ ಕುಸಿದಿದ್ದು ಈ ಬೇಸಿಗೆಯ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲಾ ಎಂದು ಡಿಸಿ ತಿಳಿಸಿದ್ದಾರೆ.

ಸಚಿವರು ರೈತರ ಸಂಪೂರ್ಣ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವರದಿಗಳ ಸಮೇತ ವಿವರವಾದ ಚರ್ಚೆ ನಡೆಸಿದರು. ಬರ ಪರಿಸ್ಥಿತಿಯನ್ನು ಎದುರಿ ಸಲು ಅಗತ್ಯ ಕ್ರಮಗಳ ಬಗ್ಗೆ ಸಚಿವರು ಮಾರ್ಗದರ್ಶನ ನೀಡಿದರು. ಆ.8ರಂದು ಮಸ್ಕಿ, ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲೂಕುಗಳಿಗೆ ಭೇಟಿ ನೀಡಿ, ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ.

---

ಬಾಕ್ಸ್

ರೈತರ ನೆರವಿಗೆ ಧಾವಿಸಲು ಸರ್ಕಾರ ಸಿದ್ಧತೆ

ದೇವದುರ್ಗ: ಮಳೆ ಅಭಾವದಿಂದ ಜಿಲ್ಲೆಯಲ್ಲಿ ಬೆಳೆ ನಷ್ಟ ಉಂಟಾಗಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ ಎಂದು ಸಚಿವರಾದ ಡಾ.ಅಜಯ್ ಧರಂಸಿಂಗ್ ಹೇಳಿದರು.

ತಾಲೂಕಿನ ಗಬ್ಬೂರು ಹೋಬಳಿಯ ರಾಮದುರ್ಗ ಕ್ರಾಸ್‌ನಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿ, ಮಾತನಾಡಿದರು.

ರಾಯಚೂರು ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ ಹತ್ತಿ ಬೆಳೆಯೇ ಪ್ರಮುಖವಾಗಿದೆ. ಆದರೆ ಸೂಕ್ತ ಮಳೆಯಿಲ್ಲದೆ ರೈತರು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬಾರಿ ಬಿತ್ತನೆ ಮಾಡಿದ್ದರೂ ಬೆಳೆ ಸರಿಯಾಗಿ ಬಂದಿಲ್ಲ. ಕಳೆದ ಒಂದು ವಾರದಿಂದ ಮಳೆಯ ಸುಳಿವೇ ಇಲ್ಲದೆ ಬೆಳೆ ಸಂಪೂರ್ಣ ಒಣಗಿ ಹೋಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳು ಹಾಗೂ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಪ್ರತಿಯೊಂದು ತಾಲೂಕಿಗೂ ಭೇಟಿ ನೀಡಿ ಸ್ಥಿತಿಗತಿಯನ್ನು ಪರಿಶೀಲಿಸಲಾಗುತ್ತಿದೆ. ಸಂಪೂರ್ಣ ಜಿಲ್ಲಾ ಮಟ್ಟದ ವರದಿಯನ್ನು ಸಿದ್ಧಪಡಿಸಿ, ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದರು.

ಮಳೆ ಅಭಾವದಿಂದ ಕಂಗಾಲಾಗಿರುವ ರೈತರು ಪ್ರತಿ ಎಕರೆಗೆ 50,000 ರು. ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ರೈತರ ಈ ನೋವಿಗೆ ಸರ್ಕಾರ ಸ್ಪಂದಿಸಲಿದ್ದು, ಗರಿಷ್ಠ ಮಟ್ಟದ ಪರಿಹಾರ ನೀಡುವ ಕುರಿತು ಉನ್ನತ ಮಟ್ಟದ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಸಚಿವರಾದ ಡಾ.ಅಜಯ್ ಧರಂಸಿಂಗ್ ಅವರು ಹೇಳಿದರು.

---

ರೈತರ ಗುಳೆ ತಡೆಯಲು ತಕ್ಷಣವೇ ಕ್ರಮ

ರೈತರ ಗುಳೆ ತಡೆಯಲು ಹಾಗೂ ಉದ್ಯೋಗ ಒದಗಿಸಲು ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ)ಯೋಜನೆಯಡಿಯಲ್ಲಿ ಹೆಚ್ಚಿನ ಕೆಲಸಗಳನ್ನು ತಕ್ಷಣವೇ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರೈತರ ಮತ್ತು ಬಡವರ ಸಂಕಷ್ಟಕ್ಕೆ ಸ್ಪಂದಿಸುವುದು ರಾಜ್ಯ ಸರ್ಕಾರದ ಮುಖ್ಯ ಧ್ಯೇಯವಾಗಿದ್ದು, ಸರ್ಕಾರವು ರೈತರ ಬೆನ್ನಿಗೆ ನಿಲ್ಲಲಿದೆ ಎಂದರು.

ರಾಯಚೂರು ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 5 ರಿಂದ 5.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿತ್ತು. ಆದರೆ ಈ ಬಾರಿ ಮಳೆ ಅಭಾವದಿಂದಾಗಿ ಕೇವಲ 2,73,000 ಹೆಕ್ಟೇರ್ (ಶೇ.50 ರಷ್ಟು) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಒಟ್ಟು ಬಿತ್ತನೆಯಾದ ಪ್ರದೇಶದಲ್ಲಿ 1,70,000 ಹೆಕ್ಟೇರ್ ಹತ್ತಿ ಹಾಗೂ 70,000 ಹೆಕ್ಟೇರ್ ತೊಗರಿ ಬಿತ್ತನೆಯಾಗಿದ್ದು, ಮಳೆಯಿಲ್ಲದೆ ರೈತರು 2-3 ಬಾರಿ ಬಿತ್ತನೆ ಮಾಡಿ ತೀವ್ರ ನಷ್ಟ ಎದುರಿಸುತ್ತಿದ್ದಾರೆ ಎಂದರು.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಅವರು ಕರ್ನಾಟಕಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ಹಾಗೂ ಬರ ಪರಿಹಾರ ನೀಡುವಂತೆ ಈಗಾಗಲೇ ಪ್ರಧಾನಮಂತ್ರಿಯವರ ಬಳಿ ಮನವಿ ಮಾಡಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳ ಬರ ಪರಿಶೀಲನೆ ಪೂರ್ಣಗೊಂಡ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಕುಡಿಯುವ ನೀರು, ಬೆಳೆ ಪರಿಹಾರ, ಬೆಳೆ ವಿಮೆ ಹಾಗೂ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಕುರಿತು ಐಸಿಸಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

---

07ಕೆಪಿಆರ್‌ಸಿಆರ್‌ 02: ರಾಯಚೂರು ತಾಲೂಕಿನ ಕಲ್ಮಲಾ ಕರಿಪ್ಪ ದೇವಸ್ಥಾನಕ್ಕೆ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ತೆರಳಿ ದರ್ಶನ ಪಡೆದರು.