ಮಂಗಳೂರು ವಿವಿ ಭ್ರಷ್ಟಾಚಾರ ತನಿಖೆ, ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಎಬಿವಿಪಿ ಆಗ್ರಹ

KannadaprabhaNewsNetwork | Published : Apr 19, 2025 12:39 AM

ಸಾರಾಂಶ

ಮಂಗಳೂರು ವಿವಿಗೆ ರಾಷ್ಟ್ರೀಯ ಉಚ್ಚತ್ತರ್‌ ಶಿಕ್ಷಾ ಅಭಿಯಾನ (ರೂಸಾ-1) ಮೂಲಕ ಬಿಡುಗಡೆಯಾದ ಹಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸುವಿತ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ವಿವಿಗೆ ರಾಷ್ಟ್ರೀಯ ಉಚ್ಚತ್ತರ್‌ ಶಿಕ್ಷಾ ಅಭಿಯಾನ (ರೂಸಾ-1) ಮೂಲಕ ಬಿಡುಗಡೆಯಾದ ಹಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸುವಿತ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013- 2017ರವರೆಗೆ ರೂಸಾ-1ರ ಮೂಲಕ ಬಿಡುಗಡೆಯಾದ 20 ಕೋಟಿ ರು. ಪೈಕಿ ಸುಮಾರು 7 ಕೋಟಿ ರು. ವೆಚ್ಚದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತ್ಯೇಕ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ ಎಂಬ ಸುಳ್ಳು ದಾಖಲೆಯನ್ನು ಮಂಗಳೂರು ವಿವಿ ಆಡಳಿತ ಮಂಡಳಿ ನೀಡಿತ್ತು. ಪರಿಶೀಲನೆಗೆ ಬಂದ ತಜ್ಞರ ಸಮಿತಿಯು ಯಾವುದೇ ಹೊಸ ಹಾಸ್ಟೆಲ್‌ ನಿರ್ಮಾಣ ಆಗದಿರುವುದನ್ನು ಕಂಡು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಿ ದುರು ದಾಖಲಿಸಿದೆ. ಈ ಬಗ್ಗೆ ಉತ್ತರಿಸುವಂತೆ ಮಂಗಳೂರು ವಿವಿ ಆಡಳಿತ ಮಂಡಳಿ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಯಿಂದ ಸಮನ್ಸ್‌ ನೀಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮಂಗಳೂರು ವಿವಿ ವ್ಯಾಪ್ತಿಗೊಳಪಡುವ ಜಿಲ್ಲೆಗಳ ಸಂಸದರು, ಶಾಸಕರು, ಉಸ್ತುವಾರಿ ಸಚಿವರನ್ನು ಒಳಗೊಂಡು ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ವಿವಿಯ ಈಗಿನ ಉಪ ಕುಲಪತಿ ಅವರು ವಿವಿಯ ಆರ್ಥಿಕ ಸಂಕಷ್ಟದ ಬಗ್ಗೆ ಮಾತನಾಡುತ್ತಾರೆ. ಆದರೆ 2017ರಲ್ಲಿ ವಿವಿಯಲ್ಲಿ 218 ಕೋಟಿ ರು. ಇತ್ತು ಎಂಬ ದಾಖಲೆ ಇದೆ. ಅಷ್ಟು ಹಣ ಖಾಲಿಯಾಗಲು ಕಾರಣ ಏನು ಎಂಬುದನ್ನು ಆ ಅವಧಿಯಿಂದ ಈವರೆಗೆ ಆಡಳಿತ ನಡೆಸಿದವರು ನೀಡಬೇಕು ಎಂದು ಒತ್ತಾಯಿಸಿದರು.

ಎಬಿವಿಪಿ ಮುಖಂಡರಾದ ಮದನ್‌ ಕುಮಾರ್‌, ಭರತ್‌ ಕುಮಾರ್‌, ಮೋನಿಶ್‌ ತುಮಿನಾಡು, ಶ್ರೀಲಕ್ಷ್ಮಿ ಇದ್ದರು.

Share this article