ಗುರುಕುಲದ ಉಳಿವಿಗೆ ಎಬಿವಿಪಿ ಹೋರಾಟ

KannadaprabhaNewsNetwork | Published : Aug 13, 2024 12:57 AM

ಸಾರಾಂಶ

2022ರಲ್ಲಿ 19 ವಿದ್ಯಾರ್ಥಿಗಳಿಗೆ 4 ವರ್ಷದ ಸಂಗೀತ ಶಿಕ್ಷಣಕ್ಕಾಗಿ ಪ್ರವೇಶಾತಿ ನೀಡಲಾಗಿತ್ತು. ಇದರಲ್ಲಿ 2 ವರ್ಷ ಪೂರ್ಣಗೊಂಡಿದೆ. ಆದರೆ ಈಗ ಗುರುಕುಲವನ್ನು 2 ತಿಂಗಳ ಹಿಂದೆ ಮೈಸೂರು ಸಂಗೀತ ವಿವಿಗೆ ಹಸ್ತಾಂತರಿಸಿ, ಗುರುಕುಲವನ್ನು ಸ್ಥಗಿತಗೊಳಿಸಲಾಗಿದೆ.

ಹುಬ್ಬಳ್ಳಿ:

ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಮೈಸೂರಿಗೆ ಹಸ್ತಾಂತರಿಸಿರುವ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಗುರುಕುಲದ ಎದುರು ಎಬಿವಿಪಿ ನೇತೃತ್ವದಲ್ಲಿ ಗುರುಕುಲದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇದೇ ವೇಳೆ ಗುರುಕುಲದ ಒಳಗೆ ನುಗ್ಗಲು ಯತ್ನಿಸಿದರು. ಬರೋಬ್ಬರಿ 3 ಗಂಟೆ ನಡೆದ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ, ಮಂಗಳವಾರ ಗುರುಕುಲಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಅಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಆಗಿರುವುದೇನು?

2022ರಲ್ಲಿ 19 ವಿದ್ಯಾರ್ಥಿಗಳಿಗೆ 4 ವರ್ಷದ ಸಂಗೀತ ಶಿಕ್ಷಣಕ್ಕಾಗಿ ಪ್ರವೇಶಾತಿ ನೀಡಲಾಗಿತ್ತು. ಇದರಲ್ಲಿ 2 ವರ್ಷ ಪೂರ್ಣಗೊಂಡಿದೆ. ಆದರೆ ಈಗ ಗುರುಕುಲವನ್ನು 2 ತಿಂಗಳ ಹಿಂದೆ ಮೈಸೂರು ಸಂಗೀತ ವಿವಿಗೆ ಹಸ್ತಾಂತರಿಸಿ, ಗುರುಕುಲವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ 19 ವಿದ್ಯಾರ್ಥಿಗಳಿಗೆ ಗುರುಗಳೇ ಇಲ್ಲದಂತಾಗಿದೆ. ತರಗತಿಗಳು ನಡೆಯುತ್ತಿಲ್ಲ. ಈ ನಡುವೆ ಮೈಸೂರು ಸಂಗೀತ ವಿವಿಯೂ ಇಲ್ಲಿ ತನ್ನ ತರಗತಿ ನಡೆಸಲು ಸೋಮವಾರ ಪ್ರವೇಶ ಪೂರ್ವ ಪರೀಕ್ಷೆ ನಡೆಸಿದೆ. ಈ ಪರೀಕ್ಷೆ ಬಂದ್‌ ಮಾಡಬೇಕು. ಗುರುಕುಲ ಪುನರಾರಂಭಿಸಿ ವಿದ್ಯಾರ್ಥಿಗಳಿಗೆ ಸೌಲಭ್ಯದ ಜತೆಗೆ ಶಿಕ್ಷಣ ನೀಡಬೇಕು. ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೊಳಪಡಿಸಬೇಕು ಎಂಬ ಬೇಡಿಕೆ ಪ್ರತಿಭಟನಾಕಾರರದ್ದು.

ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ಗುರುಕುಲ ಕಳೆದ 12 ವರ್ಷದಿಂದ ನಡೆಯುತ್ತಿದ್ದು, ಮೈಸೂರಿನ ಗಂಗೂಬಾಯಿ ಹಾನಗಲ್ಲ ವಿವಿಗೆ ಹಸ್ತಾಂತರಿಸಲಾಗಿದೆ. ಆದರೆ, ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಜಿಲ್ಲಾಡಳಿತ ಯಾವ ನಿರ್ಧಾರ ತೆಗೆದುಕೊಂಡಿಲ್ಲ. ಸೋಮವಾರ ಗುರುಕುಲದಲ್ಲಿ ನಡೆಯುತ್ತಿರುವ ವಿವಿಯ ಭರತನಾಟ್ಯದ ಪ್ರಾಯೋಗಿಕ ಪರೀಕ್ಷೆ ತಡೆಯಲು ನಿರ್ಧರಿಸಲಾಗಿತ್ತು. ಆದರೆ, ಪಾಲಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಾಂಕೇತಿಕ ಪ್ರತಿಭಟನೆ‌ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಸ್ಪಂದಿಸದಿದ್ದಲ್ಲಿ ಇಲ್ಲಿ ನಡೆಯುತ್ತಿರುವ ಪರೀಕ್ಷೆಗೆ ತಡೆಯೊಡ್ಡುವುದಾಗಿ ಎಚ್ಚರಿಕೆ ನೀಡಿದರು.

ಹಾಡುವ ಮೂಲಕ ಪ್ರತಿಭಟನೆ:

ಗುರುಕುಲದ ವಿದ್ಯಾರ್ಥಿಗಳು ಗಂಟೆಗೂ ಹೆಚ್ಚುಕಾಲ ಸಂಗೀತ ಪ್ರಸ್ತುತಪಡಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಕಲಗೌಡ ಪಾಟೀಲ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

ಒಳಗೆ ನುಗ್ಗಲು ಯತ್ನ:

ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಎಬಿವಿಪಿ ಕಾರ್ಯಕರ್ತರು ಗುರುಕುಲದ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ತಹಸೀಲ್ದಾರ್‌ ಕಲಗೌಡ ಪಾಟೀಲ ಜಿಲ್ಲಾಧಿಕಾರಿಗೆ ಕರೆ ಮಾಡಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿಸಿದರು.

ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಪತ್ರ ವ್ಯವಹಾರ, ಚರ್ಚೆ ನಡೆಸಲಾಗಿದೆ. ಈ ಎಲ್ಲ ವ್ಯವಹಾರ ಪೂರ್ಣಗೊಳ್ಳಬೇಕಾದರೆ ಕೆಲ ಸಮಯ ಹಿಡಿಯಲಿದೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ತಾಳ್ಮೆಯಿಂದಿರಿ. ಆದಷ್ಟು ಬೇಗನೆ ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಮಂಗಳವಾರ ಗುರುಕುಲಕ್ಕೆ ಸ್ವತಃ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಗುರುಕುಲದ ವಿದ್ಯಾರ್ಥಿಗಳಾದ ಪ್ರತೀಕ ಓಂಕಾರ, ಶಿವಸ್ವಾಮಿ, ಮಹೇಶ ಹುಳ್ಳೇಕಾರ, ಯಶ್‌ರಾಜ ಶೆವಾಲೆ, ಸಚಿನ್‌, ಎಬಿವಿಪಿ ಉತ್ತರ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಸಚಿವ ಕುಳಗೇರಿ, ನಗರ ಕಾರ್ಯದರ್ಶಿ ಸಿದ್ಧಾರ್ಥ ಕೋರಿ ಸೇರಿದಂತೆ ಹಲವರಿದ್ದರು. ನಾವಿಲ್ಲಿ ಗುರುಗಳ ಹತ್ರ ಸಂಗೀತ ಕಲಿಯಾಕ ಬಂದೀವ್ರಿ. ನಮ್ಗ ಡಿಗ್ರಿ, ಸರ್ಟಿಫಿಕೇಟ್‌ ಬೇಕಾಗಿದ್ರ ಎಲ್ಲೋ ಹೋಗ್ತಿದ್ವಿ. ಈ ಗುರುಕುಲದೊಳ್ಗ ಸಿಗುವ ಶಿಕ್ಷಣ ಎಲ್ಲಿ ಸಿಗಂಗಿಲ್ಲರ್ರಿ. ನಮ್ಗ ಹಿಂದೆ ಕಲಿಸಿದ ಗುರುಗಳು ಮತ್‌ ಬರ್ಬೇಕು. ನಾವು ಗುರುಕುಲ ಬಿಟ್ಟು ಎಲ್ಲೂ ಹೋಗಂಗಿಲ್ಲ ಎಂದು ಗುರುಕುಲದ ವಿದ್ಯಾರ್ಥಿ ಓಂಕಾರ ಪತ್ತಾರ ಹೇಳಿದರು.

ನಾವು ಇಲ್ಲಿಗೆ ಗುರುಕುಲದ ಮಾದರಿಯಲ್ಲಿ ಸಂಗೀತ ಕಲಿಯಲು ಬಂದಿದ್ದೆವು. ಸರ್ಕಾರ ದಿಢೀರನೇ ಇದನ್ನು ಬಂದ್‌ ಮಾಡಿರುವುದು ತುಂಬಾ ನೋವು ತಂದಿದೆ. ನಮ್ಮ ಈ ಅತಂತ್ರ ಸ್ಥಿತಿಯನ್ನು ಕಂಡು ಪಾಲಕರಲ್ಲೂ ಆತಂಕ ಎದುರಾಗಿದೆ ಎಂದು ಗುರುಕುಲದ ವಿದ್ಯಾರ್ಥಿನಿ ಸೌಕಶ್ರೀ ಕುಲಕರ್ಣಿ ತಿಳಿಸಿದರು.ಗುರುಕುಲಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದ್ದೇನೆ. ಅಲ್ಲಿರುವ ಮಕ್ಕಳಿಗೆ ಊಟದ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಮಹಾನಗರ ಪಾಲಿಕೆ ಪೌರಕಾರ್ಮಿಕರಿಂದ ಗುರುಕುಲದ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಕಲಗೌಡ ಪಾಟೀಲ ಹೇಳಿದರು.

Share this article