ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

KannadaprabhaNewsNetwork |  
Published : Jul 23, 2026, 01:15 AM IST
ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ | Kannada Prabha

ಸಾರಾಂಶ

ಸದ್ಯಕ್ಕೆ ಕಾಲೇಜುಗಳ ನಿರ್ವಹಣೆಗೆ 12,000 ಅತಿಥಿ ಉಪನ್ಯಾಸಕರ ಅಗತ್ಯವಿದ್ದು, ಈ ಹುದ್ದೆಗಳಿಗೆ 55,000ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಶೈಕ್ಷಣಿಕ ವರ್ಷ ಆರಂಭವಾದರೂ ನೇಮಕಾತಿ ವಿಳಂಭ ಆಗುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಸರ್ಕಾರ ಕೂಡಲೇ ಕೌನ್ಸಿಲಿಂಗ್ ನಡೆಸಿ ಆದೇಶ ನೀಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪಿಯು ಮತ್ತು ಪದವಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಸೌಲಭ್ಯದ ಕೊರತೆ, ಹಾಸ್ಟೆಲ್ ಸಮಸ್ಯೆ ಹಾಗೂ ಬಾಕಿ ಇರುವ ವಿದ್ಯಾರ್ಥಿ ವೇತನ ವಿಳಂಬದಂತಹ ತೀವ್ರ ಶೈಕ್ಷಣಿಕ ಬಿಕ್ಕಟ್ಟಿನ ನಡುವೆಯೂ, ರಾಜ್ಯದಲ್ಲಿ ಈ ಜವಾಬ್ದಾರಿ ಹೊರಬೇಕಾದ ಶಿಕ್ಷಣ ಸಚಿವರೇ ಇಲ್ಲ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ನಗರ ಪಾಲಿಕೆ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಎಚ್‌. ನಂದನ್‌ ಕುಮಾರ್‌, ರಾಜ್ಯದ ಹಲವು ಭಾಗಗಳಲ್ಲಿ ಸಾರಿಗೆ ಸಂಸ್ಥೆ ಬಸ್‌ ಗಳ ಕೊರತೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ತರಗತಿಗೆ ಸಕಾಲಕ್ಕೆ ತಲುಪಲಾಗುತ್ತಿಲ್ಲ. ಇಲಾಖೆಯ ಸಮನ್ವಯದ ಕೊರತೆಯಿಂದಾಗಿ ವಿದ್ಯಾರ್ಥಿ ಪಾಸ್ ವಿತರಣೆಯೂ ವಿಳಂಬವಾಗಿದ್ದು, ನಿತ್ಯ ಬಸ್ ನ ಫುಟ್‌ ಬೋರ್ಡ್ ಮೇಲೆ ಪ್ರಾಣದ ಹಂಗು ತೊರೆದು ಪ್ರಯಾಣಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಇದರ ಬೆನ್ನಲ್ಲೇ, ಸರ್ಕಾರಿ ವಿದ್ಯಾರ್ಥಿನಿಲಯಗಳ ಪ್ರವೇಶಾತಿ ಪ್ರಕ್ರಿಯೆಯು ಆಮೆಗತಿಯಲ್ಲಿ ಸಾಗುತ್ತಿದ್ದು, ದೂರದ ಊರುಗಳಿಂದ ಬಂದ ಬಡ ವಿದ್ಯಾರ್ಥಿಗಳು ವಸತಿ ಮತ್ತು ಊಟದ ಸೌಕರ್ಯವಿಲ್ಲದೆ ಬೀದಿಪಾಲಾಗುವಂತಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮತ್ತೊಂದೆಡೆ, ಕಳೆದ ಸಾಲಿನಿಂದಲೂ ಬಾಕಿ ಇರುವ ವಿದ್ಯಾಸಿರಿ ಸೇರಿದಂತೆ ವಿವಿಧ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ (ಸ್ಕಾಲರ್ಶಿಪ್) ಇನ್ನು ಇಲಾಖೆಗಳಿಂದ ಬಿಡುಗಡೆ ಆಗಿಲ್ಲ. ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆ ನೆಪವೊಡ್ಡಿ ಇಲಾಖೆಗಳು ಕಾಲಹರಣ ಮಾಡುತ್ತಿರುವುದರಿಂದ, ವಿದ್ಯಾರ್ಥಿಗಳು ಕಾಲೇಜು ಶುಲ್ಕ ಹಾಗೂ ಪರೀಕ್ಷಾ ಸರಣಿಯ ವೆಚ್ಚ ಭರಿಸಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ಅಂತೆಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಕೂಡಲೇ ಪೂರ್ಣಗೊಳಿಸಬೇಕು. ರಾಜ್ಯದ ಒಟ್ಟು 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 3,000 ಕಾಯಂ ಉಪನ್ಯಾಸಕರ ಹುದ್ದೆ ಖಾಲಿ ಇವೆ. ಪ್ರಸ್ತುತ ಕೇವಲ 3,000 ಕಾಯಂ ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದು ಒಟ್ಟು ಅಗತ್ಯದ ಕೇವಲ ಶೇ. 20ರಷ್ಟಾಗಿದೆ. ಉಳಿದ ಶೇ. 80ರಷ್ಟು ಬೋಧನಾ ವ್ಯವಸ್ಥೆಯು ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬಿತವಾಗಿದೆ ಎಂದರು.

ಸದ್ಯಕ್ಕೆ ಕಾಲೇಜುಗಳ ನಿರ್ವಹಣೆಗೆ 12,000 ಅತಿಥಿ ಉಪನ್ಯಾಸಕರ ಅಗತ್ಯವಿದ್ದು, ಈ ಹುದ್ದೆಗಳಿಗೆ 55,000ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಶೈಕ್ಷಣಿಕ ವರ್ಷ ಆರಂಭವಾದರೂ ನೇಮಕಾತಿ ವಿಳಂಭ ಆಗುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಸರ್ಕಾರ ಕೂಡಲೇ ಕೌನ್ಸಿಲಿಂಗ್ ನಡೆಸಿ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ನಗರ ಕಾರ್ಯದರ್ಶಿ ಸಜಿತ್, ಮೇಘನಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂದಾರ ಬಾಳುಗೋಡು, ಗೌರವ್‌, ಲಕ್ಷ್ಮೀ, ಭಾನುತೇಜ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ: ಮೋದಿ ಜವಾಬ್ದಾರಿ ಹೊರಲಿ
ಪ್ಲಾಸ್ಟಿಕ್ ಮುಕ್ತ ಸುರಪುರ ನಿರ್ಮಾಣಕ್ಕೆ ಕೈಜೋಡಿಸಿ