ನೀಟ್‌ ಅಕ್ರಮ ಪ್ರತಿಭಟನೆ ಹಿಂಸಾರೂಪ: ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

KannadaprabhaNewsNetwork |  
Published : Jul 23, 2026, 01:15 AM IST
7 | Kannada Prabha

ಸಾರಾಂಶ

ನಿನ್ನೆ ದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಲಾಗಿದೆ. ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನೀಟ್ ಅಕ್ರಮ‌ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಅಮಾನವೀಯ ದಾಳಿ ಹಿಂಸಾರೂಪ ತಳೆದಿದ್ದು, ಪ್ರತಿಪಕ್ಷ ನಾಯಕರ ಬಂಧನ ಖಂಡನೀಯ. ಈ ಘಟನೆಯ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಲಾಗಿದೆ. ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಈ ಘಟನೆಗೆ ಕೇವಲ ಶಿಕ್ಷಣ ಸಚಿವರು ಮಾತ್ರವಲ್ಲದೆ, ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಆರ್‌ಎಸ್‌ಎಸ್ ಗೂಂಡಾಗಳು:

ಪ್ರತಿಭಟನೆ ವೇಳೆ ಸಶಸ್ತ್ರ ಸಿಆರ್‌ಪಿಎಫ್, ಪೊಲೀಸರ ಹೊರತಾಗಿ, ಸಮವಸ್ತ್ರ ಧರಿಸದ ಹಲವು ವ್ಯಕ್ತಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ. ಇವರು ಆರ್‌ಎಸ್‌ಎಸ್ ಬೆಂಬಲಿತ ಗೂಂಡಾಗಳೇ ಎಂಬ ಸಂಶಯವಿದ್ದು, ಗೃಹ ಸಚಿವಾಲಯ ತಕ್ಷಣವೇ ಇದರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಲಕ್ಷಾಂತರ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದು, ನೀಟ್ ಸೇರಿದಂತೆ ಪ್ರಮುಖ ಪ್ರವೇಶ ಪರೀಕ್ಷೆಗಳು ಸರಣಿ ಭ್ರಷ್ಟಾಚಾರ, ಪೇಪರ್ ಲೀಕ್ ಮಾಫಿಯಾಗೆ ಬಲಿಯಾಗಿವೆ. 2014 ರಿಂದ ಈವರೆಗೆ ಜೆಇಇ, ನೀಟ್ ಹಾಗೂ ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳು ಸೇರಿದಂತೆ 152 ಪೇಪರ್ ಲೀಕ್ ಆಗಿವೆ. ಪ್ರಿಂಟಿಂಗ್ ಪ್ರೆಸ್, ಸಾಗಾಣಿಕೆ ಹಂತದಲ್ಲೇ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕಿನಿಂದ ಚೋರಿಯಾಗುತ್ತಿದೆ ಎಂದು ಆರೋಪಿಸಿದರು.

ಪರೀಕ್ಷಾ ಒತ್ತಡ ಮತ್ತು ಅಕ್ರಮಗಳಿಂದಾಗಿ ದೇಶಾದ್ಯಂತ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ವಾರ್ಷಿಕ ಸುಮಾರು 1.36 ಲಕ್ಷ ಕೋಟಿ ರು. ಬಜೆಟ್ ಮೀಸಲಿಡುತ್ತದೆ. ಆದರೆ, ನೀಟ್‌ಹಾಗೂ ಖಾಸಗಿ ಕೋಚಿಂಗ್ ಸೆಂಟರ್‌ ಹೆಸರಿನಲ್ಲಿ ಪೋಷಕರು ಪಾವತಿಸುತ್ತಿರುವ ಕೋಟ್ಯಂತರ ರು. ಹಣ ಸರ್ಕಾರದ ಶಿಕ್ಷಣ ಬಜೆಟ್‌ ಗಿಂತಲೂ ಹೆಚ್ಚಿದೆ ಎಂದರು.

ನೀಟ್ ಒಂದು ಬೋಗಸ್ ವ್ಯವಸ್ಥೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬವನ್ನು ಆರ್ಥಿಕವಾಗಿ ಲೂಟಿ ಮಾಡಲಾಗುತ್ತಿದೆ. ಪರೀಕ್ಷೆಗಳು, ಪ್ರಶ್ನೆ ಪತ್ರಿಕೆ ಸಿದ್ಧತೆ ಹಾಗೂ ಉದ್ಯೋಗ ನೇಮಕಾತಿ ಸಂಬಂಧಿಸಿದಂತೆ ಸರ್ಕಾರ ವರ್ಷದ ಆರಂಭದಲ್ಲೇ ಸ್ಪಷ್ಟ ಮತ್ತು ಪಾರದರ್ಶಕ ವಾರ್ಷಿಕ ಪರೀಕ್ಷಾ ಕ್ಯಾಲೆಂಡರ್ ಬಿಡುಗಡೆಗೊಳಿಸಬೇಕು ಎಂದು ತಿಳಿಸಿದರು.

ಈ ವಿಷಯದಲ್ಲಿ ಕಾಂಗ್ರೆಸ್ ಅರಾಜಕತೆ ಸೃಷ್ಟಿಸುತ್ತಿಲ್ಲ. ಯಾವುದೇ ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಹೋರಾಟವಲ್ಲ. ಎನ್‌ಎಸ್‌ಯುಐ ಮತ್ತು ಯೂತ್ ಕಾಂಗ್ರೆಸ್ ಮೊದಲ ದಿನದಿಂದಲೂ ಸಂಕಷ್ಟದಲ್ಲಿವ ವಿದ್ಯಾರ್ಥಿ ಕುಟುಂಬಗಳ ಜೊತೆ ನಿಂತಿವೆ. ಈ ವ್ಯವಸ್ಥಿತ ಅಕ್ರಮವನ್ನು ಜನರೆದುರು ತೆರೆದಿಡುತ್ತಿದ್ದೇವೆ. ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರೀಕ್ಷೆಗಳ ಸೋಲಿಗೆ ಜೀವ ಕಳೆದುಕೊಳ್ಳಬೇಡಿ, ದೇಶಕ್ಕೆ ನಿಮ್ಮ ಅಗತ್ಯವಿದೆ ಎಂಬ ಕುರಿತು ಜಾಗೃತಿ ಮೂಡಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ‌ಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮುಖಂಡರಾದ ನಾಗೇಶ್ ಕರಿಯಪ್ಪ, ಪ್ರದೀಪ್ ಕುಮಾರ್, ಶಿವಣ್ಣ, ಗಿರೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ: ಮೋದಿ ಜವಾಬ್ದಾರಿ ಹೊರಲಿ
ಪ್ಲಾಸ್ಟಿಕ್ ಮುಕ್ತ ಸುರಪುರ ನಿರ್ಮಾಣಕ್ಕೆ ಕೈಜೋಡಿಸಿ