ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ವಾಪಸ್‌ಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

KannadaprabhaNewsNetwork |  
Published : Jun 12, 2025, 01:00 AM IST
10ಎಚ್ಎಸ್ಎನ್17 :  | Kannada Prabha

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಆತ್ಮಸ್ಥೆರ್ಯ ಕುಂದಿಸುವಂತಹ ಮತ್ತು ಅವರ ಸಾಮರ್ಥ್ಯವನ್ನು ಪ್ರಶ್ನಿಸುವಂತಹ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಮಂಗಳವಾರ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಕಷ್ಟಕರ ಸಂದಿಗ್ಧ ಸಂದರ್ಭದಲ್ಲಿ ಕುಟುಂಬದವರ ನೋವಿಗೆ ವಿದ್ಯಾರ್ಥಿ ಪರಿಷತ್ ಸಾಂತ್ವನವನ್ನು ತಿಳಿಸುತ್ತಾ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಆತ್ಮಸ್ಥೆರ್ಯ ಕುಂದಿಸುವಂತಹ ಮತ್ತು ಅವರ ಸಾಮರ್ಥ್ಯವನ್ನು ಪ್ರಶ್ನಿಸುವಂತಹ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಮಂಗಳವಾರ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆಯ ಯಶವಂತ್ ಮಾಧ್ಯಮದೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ತೀರ್ಮಾನದಿಂದ ಜರುಗಿದ ಕಾಲ್ತುಳಿತ ಹಾಗೂ ಸಾವು ನೋವುಗಳ ಕುರಿತು ಎಬಿವಿಪಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ. ೧೮ ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಸನ್ಮಾನಿಸಲು ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಎಂ.ಎನ್ ಕರಿಬಸವನಗೌಡರವರ ಎಚ್ಚರಿಕೆಯ ನಡುವೆಯೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮದ ಆತುರದ ಯೋಜನೆ ಹಾಗೂ ವ್ಯವಸ್ಥಿತ ತಯಾರಿ ಇಲ್ಲದೆ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯ ಆಯೋಜನೆಯ ಪರಿಣಾಮ ೧೧ ಯುವ ಜನರು ಸಾವಿಗೆ ಈಡಾಗಿದ್ದು ಈ ನಾಡಿನ ದುರ್ದೈವ ಎಂದರು. ೧೮ ವರ್ಷಗಳ ನಂತರ ಆರ್‌ಸಿಬಿ ಟ್ರೋಫಿ ಜಯಿಸಿದ ಉನ್ಮಾದಲಿದ್ದ ಯುವ ಜನತೆ, ಪುಕ್ಕಟ್ಟೆ ಪ್ರಚಾರಪ್ರಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿಲುವು, ಲಕ್ಷಾಂತರ ಜನ ಸೇರಬಹುದಾದ ನಿರೀಕ್ಷೆಯಲ್ಲಿದ್ದ ಕಾರ್ಯಕ್ರಮದ ಅಪಾಯಗಳು ಮತ್ತು ಸವಾಲುಗಳ ಬಗೆಗೆ ಅರಿವಿದ್ದು ತೋರಿದ ತಿಳಿಗೇಡಿತನದ ಪರಿಣಾಮ ೧೧ ಯುವಜನರ ಸಾವು ಆಗಿದೆ. ಮನೆ ಬೆಳಗಬೇಕಿದ್ದ ಕುಡಿಗಳ ಕಳೆದುಕೊಂಡ ಕುಟುಂಬಗಳ ಆಕ್ರಂದನ ರಾಜ್ಯದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ, ಪೊಲೀಸ್ ಇಲಾಖೆ, ಕೆಎಸ್‌ಸಿಎ, ಆರ್‌ಸಿಬಿ ಮ್ಯಾನೇಜ್ಮೆಂಟ್ ಹಾಗೂ ಜನರ ಅತಿರೇಕದ ನಡವಳಿಕೆ ಸೇರಿದಂತೆ ಹಲವಾರು ಹಂತಗಳಲ್ಲಿ ಲೋಪಗಳಾಗಿದ್ದು ಕಣ್ಣಿಗೆ ಕಾಣುವ ಸತ್ಯ. ಈ ಪ್ರಕರಣದ ತೀವ್ರತೆಯನ್ನು ಅರಿತು ರಾಜ್ಯ ಸರ್ಕಾರ ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ, ನ್ಯಾಯಾಂಗ ತನಿಖೆ, ಸಿಐಡಿ ತನಿಖೆ ಈ ರೀತಿ ಬಹುವಿಧದ ತನಿಖೆಗಳಿಗೆ ಆದೇಶಿಸಿ, ಹಲವು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿರುವುದು ಅಕ್ಷಮ್ಯ. ಆದರೆ ಈ ಕಾಲ್ತುಳಿತ ಪ್ರಕರಣಕ್ಕೆ ನೇರ ಹೊಣೆಗಾರರಾಗಿರುವ ಅಧಿಕಾರಿಗಳ ಮೇಲೆ ದರ್ಪ ತೋರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ತಾವೇ ಐಪಿಎಲ್ ಟ್ರೋಫಿ ಜೈಸಿದಷ್ಟು ಉಮೇದಿನಲ್ಲಿದ್ದ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಬೇಜವಾಬ್ದಾರಿತನದ ನಡವಳಿಕೆಗಳನ್ನು ಒಪ್ಪಿಕೊಳ್ಳದಿರುವುದು ದುರದೃಷ್ಟಕರ ಎಂದರು.

ಈ ದೇಶದಲ್ಲಿ ಕಳೆದೊಂದು ವರ್ಷದಲ್ಲಿ ಅತ್ಯಂತ ಹೆಚ್ಚು ಜನ ಸಂದಣಿ ಇರುವ ಕಾರ್ಯಕ್ರಮಗಳಲ್ಲಿ ಕಾಲ್ತುಳಿತಕ್ಕೊಳಗಾಗಿ ಈಗಾಗಲೇ ನೂರಾರು ಜನರು ಸಾವನ್ನಪ್ಪಿರುವ ಘಟನೆಗಳು ಉತ್ತರ ಪ್ರದೇಶ ಗೋವಾ ಹಾಗೂ ತಿರುಪತಿ ಸೇರಿದಂತೆ ಸಾಕಷ್ಟು ಕಡೆ ಉದಾಹರಣೆ ಸಹಿತ ಪ್ರಕರಣಗಳು ಕಣ್ಣ ಮುಂದಿದ್ದರೂ ಮುಂಜಾಗ್ರತೆ ಕ್ರಮ ವಹಿಸದೆ ಇದ್ದದ್ದು ಆಡಳಿತಗಾರರ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿ ಎಂದು ದೂರಿದರು. ಈ ಕಷ್ಟಕರ ಸಂದಿಗ್ಧ ಸಂದರ್ಭದಲ್ಲಿ ಕುಟುಂಬದವರ ನೋವಿಗೆ ವಿದ್ಯಾರ್ಥಿ ಪರಿಷತ್ ಸಾಂತ್ವನವನ್ನು ತಿಳಿಸುತ್ತಾ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇವೆ ಎಂದು ಹೇಳಿದರು.ಈ ಸಂಭ್ರಮಾಚರಣೆಯ ಆತುರದ ಆಯೋಜನೆ, ವಿವೇಚನಾ ರಹಿತ ತೀರ್ಮಾನ, ಪೊಲೀಸ್ ಇಲಾಖೆಯ ಎಚ್ಚರಿಕೆಯ ಕಡೆಗಣನೆ, ಪುಕ್ಕಟೆ ಪ್ರಚಾರಪ್ರಿಯ ಕಾಂಗ್ರೆಸ್ ನಾಯಕರ ವರ್ತನೆ, ಯುವಜನರ ಉನ್ಮಾದ, ಸಾಮಾಜಿಕ ಜಾಲತಾಣಗಳಲ್ಲಿನ ಅನಿಯಂತ್ರಿತ ಮಾಹಿತಿ ಸೇರಿದಂತೆ ಹಲವಾರು ಲೋಪಗಳಿಂದ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.ಇದೇ ಸಂದರ್ಭದಲ್ಲಿ ಈ ಪ್ರಕರಣದ ಸೂಕ್ತ ತನಿಖೆ ನಡೆಸದೆ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಆತ್ಮಸ್ಥೆರ್ಯ ಕುಂದಿಸುವಂತಹ ಮತ್ತು ಅವರ ಸಾಮರ್ಥ್ಯವನ್ನು ಪ್ರಶ್ನಿಸುವಂತಹ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಹಾಗೂ ಈ ದುರ್ಘಟನೆಯ ನೈತಿಕ ಹೊಣೆಗಾರಿಕೆಯಿಂದ ನುಣಚಿಕೊಳ್ಳದಂತೆ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಉತ್ತರದಾಯಿತ್ವದ ಅರಿವು ಮೂಡಿಸಬೇಕೆಂದು ವಿದ್ಯಾರ್ಥಿ ಪರಿಷತ್ ಒತ್ತಾಯಿಸುತ್ತದೆ ಎಂದರು. ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಶ್ರೀನಿವಾಸ್ ಸಾವರ್ಕರ್‌, ಲೇಪಾಕ್ಷ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ