ಕನ್ನಡಪ್ರಭ ವಾರ್ತೆ ಹಾಸನ
ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆಲ್ಲಾ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಇಂದಿಗೂ ಕೂಡ ಎಷ್ಟೋ ಹಳ್ಳಿಗಳಿಗೆ ಬಸ್‌ಗಳ ಸಂಪರ್ಕ ಇಲ್ಲ. ಇಂತಹ ಸಮಯದಲ್ಲಿ ಸಮಸ್ಯೆ ನಿವಾರಣೆಗಾಗಿ ಹೆಚ್ಚಿನ ಬಸ್‌ಗಳನ್ನು ಕೂಡಲೇ ಬಿಡಬೇಕು ಮತ್ತು ಎಲ್ಲಾ ಬಸ್ಸುಗಳಲ್ಲೂ ವಿದ್ಯಾರ್ಥಿ ಬಸ್ ಪಾಸ್ ಅನುಮತಿಸಬೇಕು ಎಂದು ಒತ್ತಾಯಿಸಿ ಬುಧವಾರ ಎಬಿವಿಪಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಎಬಿವಿಪಿ ಮುಖಂಡ ಶ್ರೀನಿವಾಸ್ ಸಾವರ್ಕರ್ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರದ ಸೌಲಭ್ಯಗಳು ಏನೇನು ಇವೆ ಅದರ ಬಗ್ಗೆ ಮಾಹಿತಿ ನೀಡಲು ಈ ಡಿವಿಟಿ ಎನ್ನುವ ಅಪ್ಲಿಕೇಶನ್ ಅನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ನಮಗೆ ಏನೇನು ಸೌಲಭ್ಯ ಬಂದಿದೆ ಅಂತ ಈ ಡಿವಿಟಿ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ನೋಡಿದರೆ ಅದರಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆ ಆಗಿದೆ ಎಂದು ಬರುತ್ತದೆ. ಆದರೆ ಬ್ಯಾಂಕಲ್ಲಿ ಹೋಗಿ ವಿಚಾರಿಸಿದರೆ ಯಾವುದೇ ಹಣ ಬಂದಿರುವುದಿಲ್ಲ. ಈ ರೀತಿಯಾಗಿ ಕೊನೆ ಬಾರಿ ಶೇಕಡ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಳೆಯ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನವೇ ಬಂದಿರುವುದಿಲ್ಲ. ಆದರೆ ಹೊಸ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಕರೆದು ಅರ್ಜಿ ಹಾಕುವ ಅವಕಾಶ ಮುಗಿದುಹೋಗಿದೆ. ಆದರೆ ಹಳೆಯ ವರ್ಷದ ಸ್ಕಾಲರ್‌ಶಿಪ್ ಇಲ್ಲ ಪ್ರಸ್ತುತ ಶೈಕ್ಷಣಿಕ ವರ್ಷದ ಸ್ಕಾಲರ್‌ಶಿಪ್ ಸಮೇತ ಬಂದಿಲ್ಲ ಎಂದು ದೂರಿದರು.ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಭೋಜನ ವೆಚ್ಚ ಹೆಚ್ಚಿಸುವ ಬಗ್ಗೆ ಪ್ರಸ್ತುತ ಕರ್ನಾಟಕದ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಿಗೆ ಮೀಲ್ಸ್ ಬಜೆಟ್‌ನಂತೆ ೧೮೫೦ ರು. ಇದೆ. ಅದೇ ಕೈದಿಗಳಿಗೆ ದಿನದ ಸಂಬಳ ೫೨೦ಕ್ಕೂ ಹೆಚ್ಚು ಮತ್ತು ಬಜೆಟ್ ಪ್ರಕಾರ ಫ್ರೀ ಊಟಕ್ಕೆ ೭೫ ರು. ಇದೆ. ಅಂದರೆ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಕೈದಿಗಳಿಗಿಂತ ಕಡಿಮೆ. ಈ ೬೧ ರುಪಾಯಿ ಇಂದ ದಿನಕ್ಕೆ ಮೂರು ಬಾರಿ ಪೌಷ್ಟಿಕ ಊಟ ಕಾಫಿ, ಟೀ ಮತ್ತು ಇನ್ನಿತರೆ ಆಹಾರಗಳನ್ನು ನೀಡಲು ಸಾಧ್ಯವೇ? ಅದಲ್ಲದೆ ಹಾಸ್ಟೆಲ್‌ಗಳು ಸ್ವಚ್ಛವಾಗಿರಬೇಕೆಂದು ಹೇಳುವ ಸರ್ಕಾರ ತಿಂಗಳಿಗೆ ೧೨೫೦ ಸ್ವಚ್ಛತೆಗೆಂದು ನೀಡುತ್ತದೆ. ತಿಂಗಳಿಗೆ 1250 ರು. ನೀಡಿದರೆ ಹಾಸ್ಟೆಲ್‌ಗಳನ್ನು ಸ್ವಚ್ಛವಾಗಿ ಇಡಲು ಸಾಧ್ಯವೇ? ಈ ವಿಚಾರದಿಂದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿ ಸಮೂಹದಲ್ಲಿ ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆಯ ಬಗ್ಗೆ ಗೊಂದಲ ಉಂಟಾಗುತ್ತಿದೆ. ಇದಕ್ಕೆ ಸರ್ಕಾರ ಅವಕಾಶ ನೀಡದೆ ಭೋಜನ ವೆಚ್ಚವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಮೈಸೂರು ಮತ್ತು ಹಾಸನ ವಿಶ್ವವಿದ್ಯಾಲಯಗಳಲ್ಲಿ ಹೋಗುತ್ತಿರುವ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ೩೮೦ ರು.ನಂತೆ ಅಂಕಪಟ್ಟಿ ಶುಲ್ಕವನ್ನು ಪಡೆದಿರುವ ವಿಶ್ವವಿದ್ಯಾಲಯಗಳು ಮಾರ್ಕ್ಸ್ ಕಾರ್ಡ್ ಅನ್ನು ನೀಡಲಿ. ಮಾರ್ಕ್ಸ್ ಕಾರ್ಡ್ ಲಭ್ಯವಿದೆ ಡಿಜಿ ಲಾಕರ್‌ನಲ್ಲಿ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಡಿಜಿ ಲಾಕರಲ್ಲಿ ಸಾಫ್ಟ್ ಕಾಪಿ ನೀಡುವುದಾದರೆ ೩೮೦ ರು. ಅಂಕಪಟ್ಟಿ ಶುಲ್ಕವನ್ನು ಏಕೆ ಪಡೆಯಬೇಕು. ಈ ಕಾರಣ ಹಾಸನ ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಮಾರ್ಕ್ಸ್ ಕಾರ್ಡನ್ನು ಹಾರ್ಡ್ ಕಾಪಿ ರೂಪದಲ್ಲಿ ನೀಡಬೇಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಎಬಿವಿಪಿಯ ಮನೋಜ್, ಜೀವನ್, ಜ್ಞಾನ, ಲೇಪಾಕ್ಷ, ಅನುಶ್ರೀ, ಧನ್ಯಶ್ರೀ ಸೇರಿದಂತೆ ಇತರರು ಉಪಸ್ಥಿತರಿದ್ದರು.