ಉಡುಪಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ 4,435 ಜನರು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಈಗಾಗಲೇ 4,413 ಮಂದಿಗೆ ಆರ್ಥಿಕ ಮಂಜೂರಾತಿ ದೊರೆತಿದೆ. 1222 ಮಂದಿ ಈಗಾಗಲೇ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಅವರಲ್ಲಿ 1135 ಜನರಿಗೆ ಈಗಾಗಲೇ ಸಬ್ಸಿಡಿ ಹಣ ಪಾವತಿಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ 4,435 ಜನರು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಈಗಾಗಲೇ 4,413 ಮಂದಿಗೆ ಆರ್ಥಿಕ ಮಂಜೂರಾತಿ ದೊರೆತಿದೆ. 1222 ಮಂದಿ ಈಗಾಗಲೇ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಅವರಲ್ಲಿ 1135 ಜನರಿಗೆ ಈಗಾಗಲೇ ಸಬ್ಸಿಡಿ ಹಣ ಪಾವತಿಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶನಿವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೂರ್ಯ ಘರ್ ಯೋಜನೆಯ ಅನುಷ್ಠಾನದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಈ ಯೋಜನೆಯ ಫಲಾನುಭವಿಗಳನ್ನು ಸತಾಯಿಸಬಾರದು. ಮೀಟರ್ ಸೇರಿದಂತೆ ಮತ್ತಿತರ ಪರಿಕರಗಳು ಸರಳವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೂರ್ಯ ಘರ್ ಯೋಜನೆಯಿಂದ ತಮ್ಮ ಮನೆಯ ವಿದ್ಯುತ್ ಬಿಲ್‌ಗಳಲ್ಲಿ ಗಮನಾರ್ಹ ಉಳಿತಾಯವಾಗುತ್ತದೆ. ಜೊತೆಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತನ್ನು ಮೆಸ್ಕಾಂಗಳಿಗೆ ಮಾರಾಟ ಮಾಡುವ ಮೂಲಕ ಆದಾಯವನ್ನೂ ಗಳಿಸುವ ಅವಕಾಶವಿದೆ. ತಿಂಗಳಿಗೆ 3 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕದಿಂದ ಸರಾಸರಿ 300 ಯೂನಿಟ್ ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು ಎಂದವರು ಹೇಳಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಸೂರ್ಯ ಘರ್ ಯೋಜನೆಯಿಂದ ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಭನೆ ಕಡಿಮೆಯಾಗಿ. ಇದರಿಂದ ಪರಿಸರ ಮಾಲಿನ್ಯವು ಹತೋಟಿಯಾಗುತ್ತದೆ. ಈ ಯೋಜನೆಯಡಿ ದೊರಕುವ ಸಹಾಯಧನ ಸೌಲಭ್ಯದ ಕುರಿತು ಹೆಚ್ಚು ಪ್ರಚಾರ ನೀಡಬೇಕು ಎಂದರು.

ಸಭೆಯಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ನರಸಿಂಹ, ಕಿರಿಮಂಜೇಶ್ವರ, ಕೋಟತಟ್ಟು, ಉಪ್ಪೂರು, ಮಜೂರು ಹಾಗೂ ನಿಟ್ಟೆ ಗ್ರಾಪಂಗಳ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಸಮಿತಿಯ ನಾಮನಿರ್ದೇಶಿತ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.-------------ಬಾಕ್ಸ್---------------

ಮಾದರಿ ಗ್ರಾಮಕ್ಕೆ 1 ಕೋಟಿ ರು. ಬಹುಮಾನ

ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮಸ್ಥರು 26 ಕಿವ್ಯಾ, ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮಸ್ಥರು 1777 ಕಿವ್ಯಾ, ಉಡುಪಿ ತಾಲೂಕಿನ ಉಪ್ಪೂರು ಗ್ರಾಮಸ್ಥರು 163 ಕಿವ್ಯಾ, ಕಾಪು ತಾಲೂಕಿನ ಮಜೂರು ಗ್ರಾಮಸ್ಥರು 13.88 ಕಿವ್ಯಾ ಹಾಗೂ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮಸ್ಥರು 1577.31 ಕಿವ್ಯಾ ವಿದ್ಯುತ್ ಉತ್ಪಾದಿಸುವ ಸೋಲಾರ್ ಘಟಕಗಳನ್ನು ಅಳವಡಿಸಿದ್ದಾರೆ.ಈ ಗ್ರಾಮಗಳಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಯಶಸ್ವಿಯಾಗಿ ಪಿಎಂ ಸೂರ್ಯ ಘರ್ ಯೋಜನೆಯನ್ನು ಅನುಷ್ಠಾನ ಮಾಡಿರುವ ಮಾದರಿ ಗ್ರಾಮವನ್ನು ಮೈಸೂರು ವಿಭಾಗೀಯ ಆಯುಕ್ತರು ಪರಾಮರ್ಶಿಸಿ ಆಯ್ಕೆ ಮಾಡಲಿದ್ದಾರೆ. ಈ ಗ್ರಾಮಕ್ಕೆ ಕೇಂದ್ರ ಸರ್ಕಾರ 1 ಕೋಟಿ ರು. ಬಹುಮಾನ ನೀಡಲಿದೆ. ಈ ಮೊತ್ತವನ್ನು ಆ ಗ್ರಾಮದಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ಬಳಸಲಾಗುವುದು ಎಂದು ಕೋಟ ಹೇಳಿದರು.