ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ । ಬೇಡಿಕೆಗಳ ಶೀಘ್ರ ಇತ್ಯರ್ಥ್ಯಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಸೇವೆ ಕಾಯಂ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲ ಸೂಚಿಸಿದೆ. ಶುಕ್ರವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಆಲಿಸಿ, ಬಗೆಹರಿಸುವುದರ ಮೂಲಕ ತರಗತಿಗಳು ಸುಗಮವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿರುವುದರಿಂದ ಪದವಿ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತಿದೆ. ಕೆಲವೊಂದು ವಿಶ್ವ ವಿದ್ಯಾಲಯಗಳು ಸೆಮಿಸ್ಟರ್ ಪರೀಕ್ಷೆಯನ್ನು ನಡೆಸುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿವೆ. ಆದರೆ ತರಗತಿಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯಬೇಕು ಎಂಬ ಪ್ರಶ್ನೆ ವಿದ್ಯಾರ್ಥಿ ಸಮುದಾಯದಲ್ಲಿ ಮೂಡುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ಅವರಿಗೆ ಗೌರವಯುತ ಜೀವನ ಸಾಧ್ಯವಾಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಯಾವುದೇ ವಿಳಂಬ ಮಾಡದೆ ಅತಿಥಿ ಉಪನ್ಯಾಸಕರಿಗೆ ನೀಡುವ ಸಂಬಳವನ್ನು ಸರ್ಕಾರಿ ನೌಕರರಿಗೆ ನೀಡುವ ಹಾಗೆ ಪ್ರತಿ ತಿಂಗಳು ನೀಡಬೇಕು. ಯುಜಿಸಿ ನಿಯಮಾವಳಿ ಪ್ರಕಾರ ವೇತನ ಸೌಲಭ್ಯ ಕಲ್ಪಿಸಬೇಕು. ಈ ವಿಷಯದಲ್ಲಿ ಉದಾಸೀನ ತೋರದೆ ಬೇಡಿಕೆ ಈಡೇರಿಸಿ ತರಗತಿಗಳು ನಡೆಯಲು ಅನುವು ಮಾಡಿಕೊಡಬೇಕು. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸರ್ಕಾರ ಕೂಡಲೇ ರಾಜ್ಯದ ಕಾಲೇಜು ಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಯನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರು ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ತರಗತಿ ಬಹಿಷ್ಕಾರದಂತಹ ತೀರ್ಮಾನವನ್ನು ಹಿಂಪಡೆಯಬೇಕು. ಪಾಠ ಪ್ರವಚನಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.ಎಬಿವಿಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುದರ್ಶನ್ ನಾಯ್ಕ, ಕನಕರಾಜ್ ಕೋಡಿಹಳ್ಳಿ, ಜಿಲ್ಲಾ ಸಂಚಾಲಕ ಸಿದ್ದೇಶ್, ನಗರ ಕಾರ್ಯರ್ಶಿ ಗೋಪಿ, ಸಾಮಾಜಿಕ ಜಾಲ ತಾಣದ ನಿರ್ವಾಹಕ ಚಿತ್ರಸ್ವಾಮಿ, ಮಹಿಳಾ ಪ್ರಮುಖ್ ಚೈತ್ರ,ಹಾಸ್ಟೆಲ್ ಪ್ರಮುಖ್ ಮನೋಜ್, ಅಜ್ಜಯ್ಯ ,ಮಹಿಳಾ ಸಹ ಪ್ರಮುಖ್ ಚಂದನ, ಕಾರ್ಯಕರ್ತರಾದ ಸುಮನ್, ದರ್ಶನ್, ತಿಪ್ಪೇಸ್ವಾಮಿ, ಸುದೀಪ್, ಮಧು ಪ್ರತಿಭಟನೆ ನೇತೃತ್ವ ವಹಿಸಿದ್ದರು.