ಶೀಗೆಹಳ್ಳಿಯಲ್ಲಿ ಅಕೇಷಿಯಾ ಮರಗಳ ಕಡಿತಲೆ: ಆಕ್ರೋಶ

KannadaprabhaNewsNetwork |  
Published : Nov 05, 2023, 01:16 AM IST
ಫೋಟೊ:೦೪ಕೆಪಿಸೊರಬ-೦೧ :  ಸೊರಬ ತಾಲೂಕಿನ ಶೀಗೆಹಳ್ಳಿ, ಚಿಕ್ಕಶಕುನ, ಬಿಳಾಗಿ ಗ್ರಾಮಗಳ ಜಾನುವಾರುಗಳ ಮೇವಿಗೆ ನೆರವಾಗಿದ್ದ ಅಕೇಶಿಯಾ ಮರಗಳನ್ನು ಅರಣ್ಯ ಇಲಾಖೆ ಕಟಾವು ಮಾಡುತ್ತಿದೆ. | Kannada Prabha

ಸಾರಾಂಶ

ಚಿಕ್ಕಶಕುನ ಸ.ನಂ.30ರ 150 ಎಕರೆ ಅರಣ್ಯ ಪ್ರದೇಶದಲ್ಲಿರುವ ಬೃಹತ್‌ ಮರಗಳು

- ಚಿಕ್ಕಶಕುನ ಸ.ನಂ.30ರ 150 ಎಕರೆ ಅರಣ್ಯ ಪ್ರದೇಶದಲ್ಲಿರುವ ಬೃಹತ್‌ ಮರಗಳು । ಜಾನುವಾರುಗಳಿಗೆ ತೊಂದರೆ: ಗ್ರಾಮಸ್ಥರ- - -

- ಎಚ್.ಕೆ.ಬಿ. ಸ್ವಾಮಿ ಕನ್ನಡಪ್ರಭ ವಾರ್ತೆ ಸೊರಬ

ಮಳೆಗಾಲದಲ್ಲಿ ಸುಡುಬಿಸಿಲ ಧಗೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ವನ ಪ್ರದೇಶಗಳಲ್ಲಿ ಅಳಿದುಳಿದ ಕಾನನದಲ್ಲಿ ಬರಡಾಗುತ್ತಿದೆ. ಈ ಮಧ್ಯೆ ಅರಣ್ಯ ಇಲಾಖೆ ತಂಪೆರೆಯುತ್ತಿದ್ದ ಶೀಗೆಹಳ್ಳಿ ಗ್ರಾಮದ ಅಕೇಶಿಯಾ ಮರಗಳನ್ನು ಧರೆಗೆ ಉರುಳಿಸುತ್ತಿದೆ. ಇಲಾಖೆಯ ಈ ಕ್ರಮವೀಗ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸೊರಬ ಪುರಸಭೆ ವ್ಯಾಪ್ತಿಗೆ ಒಳಪಡುವ ಚಿಕ್ಕಶಕುನ ಸರ್ವೆ ನಂ.30ರಲ್ಲಿರುವ ಸುಮಾರು 150 ಎಕರೆ ಅರಣ್ಯ ಪ್ರದೇಶದಲ್ಲಿ 2ರಿಂದ 3 ಸಾವಿರ ಅಕೇಷಿಯಾ ಮರಗಳು ಬೆಳೆದು ಹೆಮ್ಮರವಾಗಿವೆ. ಶಿಗೇಹಳ್ಳಿ, ಚಿಕ್ಕಶಕುನ, ಬಿಳಾಗಿ ಗ್ರಾಮಗಳ ರೈತರು ಗದ್ದೆಯಲ್ಲಿ ಬಿಸಿಲ ನಡುವೆ ಬಳಲಿ ಧಣಿವಾರಿಸಿಕೊಳ್ಳಲು ಇಂಥ ಬೃಹತ್ ಮರಗಳನ್ನೇ ಆಶ್ರಯಿಸುತ್ತಾರೆ. ಸದಾ ತಂಪೆರೆಯುವ ಈ ಮರಗಳ ಬುಡದಲ್ಲಿ ಹುಲ್ಲು ಹುಲುಸಾಗಿ ಬೆಳೆದು ದನ- ಕರುಗಳಿಗೆ ಮತ್ತು ಕಾಡು ಪ್ರಾಣಿಗಳ ಹಸಿವು ನೀಗಿಸುತ್ತಿವೆ. ಸದರಿ ಗ್ರಾಮಗಳ ಜಾನುವಾರುಗಳಿಗೆ ನೆರವಾಗಲೆಂದು ಪ್ಲಾಂಟೇಶನ್ ಪ್ರದೇಶದಲ್ಲಿ 2 ಗೋಕಟ್ಟೆಗಳನ್ನು ಸಹ ಅರಣ್ಯ ಇಲಾಖೆಯೇ ನಿರ್ಮಿಸಿ, ಪ್ರಾಣಿ- ಪಕ್ಷಿಗಳಿಗೆ ನೀರಿನ ಸೌಲಭ್ಯ ಒದಗಿಸಿದೆ. ಹೀಗಿದ್ದರೂ ಏಕಾಏಕಿ ಸರ್ಕಾರದ ಆದೇಶ ಇದೆ ಎಂದು ಇಲಾಖಾ ಅಧಿಕಾರಿಗಳು ಅಕೇಷಿಯಾ ಮರಗಳ ಕಟಾವು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಅದೇ ಸರ್ವೆ ನಂ.ನಲ್ಲಿ ಶೀಗೆಹಳ್ಳಿ, ಚಿಕ್ಕಶಕುನ, ಬಿಳಾಗಿ ಗ್ರಾಮಗಳಿಗೆ ಸೇರಿದ 88.38 ಎಕರೆ ಗೋಮಾಳವಿದೆ. ಆದರೆ, ಮಳೆಯಿಲ್ಲದೇ ಒಣಗಿ ಬರಡಾಗಿರುವ ಗೋಮಾಳ ಭೂಮಿಯಲ್ಲಿ ಜಾನುವಾರುಗಳಿಗೆ ಆಹಾರವೂ ಇಲ್ಲ, ಗುಟುಕು ನೀರೂ ಸಿಗುತ್ತಿಲ್ಲ. ಈ ಕಾರಣದಿಂದ 2ರಿಂದ 3 ಸಾವಿರ ಅಕೇಷಿಯಾ ಮರಗಳನ್ನು ಹೊಂದಿ ಸದಾ ಹಸಿರಾಗಿ, ತಂಪೆರೆದು ಹರಿಧ್ವರ್ಣದ ಕಾನನದಂತೆ ಭಾಸವಾಗುವ ಪ್ಲಾಂಟೇಷನ್‌ನನ್ನು ಜಾನುವಾರುಗಳು ಆಶ್ರಯಿಸಿವೆ. ಈಗ ಈ ಮರಗಳನ್ನು ಕಡಿಯುದರಿಂದ ಇಡೀ ಪ್ರದೇಶವೇ ಬಯಲಾಗಿ ಜಾನುವಾರುಗಳಿಗೆ ಮಾರಕ ವಾತಾವರಣ ನಿರ್ಮಾಣವಾಗುತ್ತದೆ. ಕೂಡಲೇ ಮರಗಳ ಕಡಿತಲೆ ನಿಲ್ಲಿಸಬೇಕು ಎಂಬ ಕೂಗೆದ್ದಿದೆ.

- - -

ಕೋಟ್ಸ್

ಶಿಗೇಹಳ್ಳಿ, ಚಿಕ್ಕಶಕುನ, ಬಿಳಾಗಿ ಗ್ರಾಮಗಳಿಗೆ ಹೊಂದಿಕೊಂಡಿರುವ ಅಕೇಷಿಯಾ ಮರಗಳನ್ನು ಅರಣ್ಯ ಇಲಾಖೆ ಕಟಾವು ಮಾಡುತ್ತಿದೆ. ಕಟಾವಿಗೆ ಸರ್ಕಾರದ ಆದೇಶ ಇರಬಹುದು. ಆದರೆ ಅದನ್ನು ಮುಂದಿನ ಮೂರು ತಿಂಗಳವರೆಗೆ ಮುಂದೂಡಿದರೆ ನೆರವಾಗುತ್ತದೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಹೆಚ್ಚಿನ ನಿಗಾ ವಹಿಸಿ, ಜನ-ಜಾನುವಾರುಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು

– ಕೆರಿಯಪ್ಪ ಶೀಗೆಹಳ್ಳಿ, ಅಧ್ಯಕ್ಷ, ಗ್ರಾಮ ಅಭಿವೃದ್ಧಿ ಸಮಿತಿ

16 ವರ್ಷ ತುಂಬಿರುವ ಅಕೇಶಿಯಾ ಮರಗಳನ್ನು ಕಡಿತಲೆ ಮಾಡುವ ಆದೇಶವಿದೆ. ಕಳೆದ ವರ್ಷವೇ ಈ ಪ್ರಕ್ರಿಯೆ ನಡೆಸಬೇಕಾಗಿತ್ತು. ಆದರೆ ಆಗಲಿಲ್ಲ. ಈಗಾಗಲೇ ತಾಲೂಕಿನಾದ್ಯಂತ ಅಕೇಷಿಯಾ ಮರಗಳನ್ನು ಕಡಿತಲೆ ಮಾಡಲಾಗುತ್ತಿದೆ. ಸರ್ಕಾರಕ್ಕೆ ನಷ್ಟ ಸಂಭವಿಸುವ ಅಕೇಶಿಯಾ ಬೆಳೆಯುವುದು ನಿಷೇಧವಿದೆ. ಈ ಕಾರಣದಿಂದ ಈ ಜಾಗದಲ್ಲಿ ಕಾಡುಜಾತಿಯ ಗಿಡಗಳನ್ನು ಬೆಳೆಸಲು ಆದೇಶವಿದೆ. ಬರಗಾಲ ಹಿನ್ನೆಲೆ ಜಾನುವಾರುಗಳ ಮೇವಿಗೆ ಕೆಲವು ಪ್ರದೇಶವನ್ನು ಬಿಟ್ಟುಕೊಡಲಾಗುವುದು

– ಜಾವೇದ್ ಬಾಷಾ, ವಲಯ ಅರಣ್ಯಾಧಿಕಾರಿ, ಸೊರಬ

- - - -ACACIA TREES.ಜೆಪಿಜಿ

(ಸಾಂದರ್ಭಿಕ ಚಿತ್ರ)

- - --04ಕೆಪಿಸೊರಬ01: ಅರಣ್ಯ ಇಲಾಖೆ ಕಟಾವು ಮಾಡಿರುವ ಅಕೇಶಿಯಾ ಮರಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ